fbpx
Karnataka NewsNational

ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ಕರ್ನಾಟಕದ ಜಲಪಾತಗಳು

ಮಳೆಗಾಲದಲ್ಲಿ ಜಲಪಾತಗಳು ಅತ್ಯಂತ ಸುಂದರವಾಗಿ ನೋಡುಗರ ಕಣ್ಮನ ಸೆಳೆಯುತ್ತವೆ. ಮಳೆಗಾಲ ಪ್ರಕೃತಿಯ ವೈಭವವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಾನೇ ಘಾಟ್‌ನ ‘ರಿವರ್ಸ್ ಜಲಪಾತ’ ನೋಡುಗರಿಗೆ ಆಕರ್ಷಕ ಜಲಪಾತವಾಗಿ ಜನಪ್ರಿಯವಾಗಿದ್ದರೆ ಇತ್ತ ಕರ್ನಾಟಕದ ಮತ್ತೊಂದು ಜಲಪಾತ ಜೋಗ ಜಲಪಾತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿರಂತರ ಮಳೆಯಿಂದಾಗಿ ಕರ್ನಾಟಕದ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಈ ಮಾನ್ಸೂನ್‌ನಲ್ಲಿ ಅತ್ಯಂತ ಸುಂದರವಾದ ತಾಣಗಳಲ್ಲಿ ಜೋಗ ಜಲಪಾತ ಕೂಡ ಒಂದು.

ಜೋಗ ಜಲಪಾತವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದ್ದು, ಇಲ್ಲಿ ಶರಾವತಿ ನದಿಯು 810 ಅಡಿ ಎತ್ತರದಿಂದ ಹರಿಯುತ್ತದೆ. ನದಿಯನ್ನು ನಾಲ್ಕು ಹೊಳೆಗಳಾಗಿ ವಿಂಗಡಿಸಲಾಗಿದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್. ಅವುಗಳನ್ನು ಒಟ್ಟಾರೆಯಾಗಿ ಜೋಗ ಜಲಪಾತ ಎಂದು ಕರೆಯಲಾಗುತ್ತದೆ. ಜೋಗ ಜಲಪಾತವು ಒಂದು ಸುಂದರವಾದ ದೃಶ್ಯವಾಗಿದ್ದು ಅದು ಪೂರ್ಣವಾಗಿ ತುಂಬಿದಾಗ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ.

ವಿಡಿಯೋಗಳು ವೈರಲ್ಅನೇಕ ಸಾಮಾಜಿಕ ಜಾಲತಾಣದ ಬಳಕೆದಾರರು ಜೋಗ ಜಲಪಾತದಮನಮೋಹಕ ಚಿತ್ರಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಬಳಕೆದಾರರಲ್ಲಿ ಒಬ್ಬರಾದ ಎರಿಕ್ ಸೋಲ್ಹೈಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಜಲಪಾತದ ರುದ್ರರಮಣೀಯ ದೃಶ್ಯವನ್ನು ವಿಡಿಯೋ ಹೈಲೈಟ್ ಮಾಡಿದೆ. ವಿಡಿಯೋ ಪೋಸ್ಟ್ ಮಾಡಿದ ನಂತರ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 84,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸ್ವೀಕರಿಸಿದೆ. ಪೋಸ್ಟ್‌ಗೆ 400 ಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ, ಒಬ್ಬ ಬಳಕೆದಾರರು ಬರೆದಿದ್ದಾರೆ, “ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ಪದಗಳಲ್ಲಿ ಇದನ್ನು ವರ್ಣಿಸಲು ಸಾಧ್ಯವಿಲ್ಲ ಅಷ್ಟು ಸುಂದರವಾಗಿದೆ”. ಇನ್ನೊಬ್ಬರು “ನಾನು ಬೆಂಗಳೂರು ಟ್ರಾಫಿಕ್ ಬಗ್ಗೆ ಮಾತನಾಡದೆ ಅನ್ವೇಷಿಸಿದಷ್ಟು ಸುಂದರವಾಗಿದೆ” ಎಂದು ಹೇಳಿದರು.

ಪ್ರವಾಸ ಪ್ರಿಯರಿಗೆ ಸಂತಸ

ಚಾಮರಾಜನಗರ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆ ಸುರಿಯುತ್ತಿದೆ. ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಪ್ರವಾಸ ಪ್ರಿಯರಿಗೆ ಸಂತಸದ ವಾತಾವರಣ ನಿರ್ಮಾಣವಾಗಿದೆ. ಉತ್ತಮ ಮಳೆಯಿಂದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಿಗೂ ಜೀವಕಳೆ ಬಂದಿದೆ. ಸೌಂದರ್ಯ ಹೆಚ್ಚಾಗಿದೆ.

ಬೆಂಗಳೂರು ನಗರದಿಂದ 167 ಕಿ. ಮೀ. ದೂರದಲ್ಲಿ ಈ ಜಲಪಾತಗಳಿವೆ. ಮೈಸೂರು ರೈಲ್ವೆ ನಿಲ್ದಾಣದಿಂದ ಸುಮಾರು 60 ಕಿ. ಮೀ. ದೂರದಲ್ಲಿ ಧುಮ್ಮುಕ್ಕುತ್ತದೆ ಶಿವನಸಮುದ್ರ ಜಲಪಾತ. ಗಗನಚುಕ್ಕಿ ಮತ್ತು ಭರಚುಕ್ಕಿ ಈ ಎರಡೂ ಜಲಪಾತಗಳಿಗೆ ಒಟ್ಟಾಗಿ ಶಿವನಸಮುದ್ರ ಜಲಪಾತ ಎಂದೇ ಕರೆಯಲಾಗುತ್ತದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ಭರಚುಕ್ಕಿ ಜಲಪಾತ ಮತ್ತು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತವು 1902 ರಲ್ಲಿ ಸ್ಥಾಪನೆಯಾದ ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರಗಳ ಸ್ಥಳವಾಗಿದೆ. ಬೆಂಗಳೂರಿನಿಂದಲೂ ತೀರಾ ದೂರದಲ್ಲೇನೂ ಇಲ್ಲ, ನೀವೂ ಖುಷಿಯಿಂದ ಹೋಗಿಬನ್ನಿ.

ಮಲಳ್ಳಿ ಜಲಪಾತ ನೋಡಲು ಜನ ಸಾಗರ

ಇನ್ನೂ ಮಳೆಗಾಲ ಆರಂಭವಾದರೆ ಕೊಡಗಿನ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಇಲ್ಲಿ ಸುಮಾರು 10ಕ್ಕೂ ಹೆಚ್ಚು ಜಲಪಾತಗಳು ತುಂಬಿ ಹರಿಯುತ್ತವೆ. ಅಬ್ಬಿ, ಇರ್ಪು, ಚೇಲವಾರ ಫಾಲ್ಸ್ ಹೀಗೆ ಹಲವು ಜಲಪಾತಗಳಲ್ಲಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪ್ರವಾಸಿಗರನ್ನು ಸೂಜಿ ಗಲ್ಲಿನಂತೆ ಸೆಳೆಯುವ ಕೊಡಗು ಜಿಲ್ಲೆಯ ಜಲಪಾತಗಳಲ್ಲಿ ಸೋಮವಾರಪೇಟೆ ಮಲಳ್ಳಿ ಜಲಪಾತವೂ ಒಂದಾಗಿದೆ. ಜಲಪಾತ ನೋಡಲು ಸುಂದರವಾಗಿ ಕಾಣುತ್ತದೆ. ಆದರೆ ಜಲಪಾತದ ಕೆಳಗಿರುವ ಆಳ ಯಾರಿಗೂ ತಿಳಿದಿಲ್ಲ. ನೀರಿನಲ್ಲಿ ಆಟವಾಡಲು ಇಳಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಕೊಡಗಿನ ಬೆಟ್ಟ, ಗುಡ್ಡಗಳ ಸೌಂದರ್ಯ, ಮಂಜು ಮುಸುಕಿದ ವಾತಾವರಣ, ಮಳೆಗಾಲದಲ್ಲಿ ಕಾಣಸಿಗುವ ಜಲಪಾತಗಳನ್ನು ನೋಡಲು ಜಿಲ್ಲೆಗೆ ಹೊರ ರಾಜ್ಯ, ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ‘ಅಪಾಯದ ಸ್ಥಳ’ ಎಂದು ನಾಮ ಫಲಕಗಳನ್ನು ಹಾಕಿದರೂ ಅನೇಕರು ಅದನ್ನು ಕಡೆಗಣಿಸಿ ಅಪಾಯ ತಂದು ಕೊಳ್ಳುತ್ತಿದ್ದಾರೆ.

ಸಾತೋಡಿ ಜಲಪಾತದ ರಮಣೀಯ ದೃಶ್ಯ

ಉತ್ತರ ಕನ್ನಡ ಜಲಪಾತಗಳಿಗೆ ಸ್ವರ್ಗ ತಾಣ. ಹಾಗಾಗಿ ಇದನ್ನು ಜಲಪಾತಗಳ ಜಿಲ್ಲೆ ಎಂದೇ ಕರೆಯುತ್ತಾರೆ. ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತ್ತವಾದ ಈ ಪ್ರದೇಶದಲ್ಲಿ ಜಲಧಾರೆಗಳ ವೈಭವ ನೋಡುವಂತಿರುತ್ತದೆ. ಮುಗಿಲು ಮುಟ್ಟಿರುವ ಬೆಟ್ಟಗಳ ಮೇಲಿಂದ ಭೋರ್ಗರೆಯುತ್ತಾ ಬಂದು ಭೂಮಿಗೆ ಧುಮುಕುತ್ತವೆ. ಭೂಮಿಗೆ ಬಂದ ಮೇಲೆ ಮತ್ತೆ ಸುಮ್ಮನಾಗಿ ನದಿಗೆ ಸೇರುವ ಪರಿ ಅನನ್ಯ. ಅಂತಹ ಒಂದು ಜಲಪಾತದ ಸಾಲಿನಲ್ಲಿ ಸಾತೋಡಿ ಜಲಪಾತ ಕೂಡ ಒಂದು.

ದಟ್ಟವಾದ ಕಾಡು, ಹಚ್ಚ ಹಸುರಿನ ವನಸಿರಿ, ನಡುವೆ ಹಕ್ಕಿಗಳ ಕಲರವ, ಬಂಡೆಗಳ ಮಧ್ಯೆ ಹಾವಿನಂತೆ ಹರಿದು ಬರುವ ಜಲಧಾರೆ. ಅಬ್ಬಾ! ಇದನ್ನು ನೋಡಲು ಎಷ್ಟು ಸುಂದರ ಎನಿಸುತ್ತದೆ ಅಲ್ಲವಾ? ಹೌದು, ಇಂತಹ ಒಂದು ಸೌಂದರ್ಯಕ್ಕೆ ಕನ್ನಡಿ ಹಿಡಿದು ನಿಲ್ಲುತ್ತದೆ ಸಾತೋಡಿ ಜಲಪಾತ. ವರ್ಷವಿಡೀ ವೈಯಾರದಿಂದ ಶೋಭಿಸುತ್ತದೆ. ಮಳೆಗಾಲದಲ್ಲಿ ಇನ್ನಷ್ಟು ಬಿಳಿ ನೊರೆಯಿಂದ ದುಮ್ಮಿಕ್ಕುತ್ತಾ ತಾನು ಯಾರಿಗೆ ಸರಿಸಾಟಿ ಇಲ್ಲ ಎಂದು ಕೇಳುತ್ತದೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: