ಬಜರಂಗದಳ ಕಾರ್ಯಕರ್ತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ: ನಾಲ್ವರ ವಶ

ಶಿವಮೊಗ್ಗ: ಹಿಂದೂ ಪರ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಮಾಸುವ ಮುನ್ನವೇ ಶಿವಮೊಗ್ಗ ನಗರದಲ್ಲಿ ಮತ್ತೋರ್ವ ಬಜರಂಗದಳ ಕಾರ್ಯಕರ್ತನ ಮೇಲೆ ನಾಲ್ವರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ಸೋಮವಾರ ರಾತ್ರಿ ನಗರದ ರಾಜೀವಗಾಂಧಿ ಬಡಾವಣೆಯಲ್ಲಿ ಕಾಂತರಾಜು (26) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.
ಇದಕ್ಕೆ ಸಂಬಂಧಿಸಿ ಪೊಲೀಸರು ಮಂಗಳವಾರ ಅದೇ ಬಡಾವಣೆಯ ಸಾಧಿಕ್, ಶೊಯೇಬ್, ಜುನೈದ್ ಮತ್ತು ಮುಬಾರಕ್ ಎಂಬ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ರಾತ್ರಿ 10.30ರ ಹೊತ್ತಿಗೆ ಕಾಂತರಾಜು ಊಟ ಮುಗಿಸಿ ಮನೆಯಿಂದ ಹೊರ ಬಂದ ವೇಳೆ ಏಕಾಏಕಿ ದಾಳಿ ನಡೆಸಲಾಗಿದೆ. ಕಾಂತರಾಜು ಅವರ ಕೈ ಹಾಗೂ ಬೆನ್ನಿಗೆ ಗಾಯವಾಗಿದೆ. ತತ್‌ಕ್ಷಣ ಕಾಂತರಾಜು ಅವರು ಮಚ್ಚು ಕಸಿದುಕೊಂಡಿದ್ದಲ್ಲದೇ ಮನೆ ಕಡೆ ಓಡಿ ಬಾಗಿಲು ಹಾಕಿಕೊಂಡಿದ್ದಾರೆ. ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಚಿಕಿತ್ಸೆ ನಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಹಳೇ ದ್ವೇಷದಿಂದ ಹಲ್ಲೆ
ಊಟ ಮುಗಿಸಿ ಮೂತ್ರ ವಿಸರ್ಜನೆಗೆ ಎಂದು ಮನೆಯಿಂದ ಹೊರಗೆ ಬಂದಿದ್ದೆ. ಈ ವೇಳೆ ಮಚ್ಚಿನಿಂದ ದಾಳಿ ಮಾಡಿದರು. ಬಲಗೈನ ಎರಡು ಕಡೆ ಮಚ್ಚಿನ ಏಟು ಬಿದ್ದಿದೆ. ಹಳೆ ದ್ವೇಷದ ಕಾರಣಕ್ಕೆ ಹಲ್ಲೆ ಮಾಡಿರುವ ಅನುಮಾನವಿದೆ. ಹರ್ಷ ಹತ್ಯೆ ಪ್ರಕರಣದ ಸಂದರ್ಭದ ಜಗಳ, ಬಿಜೆಪಿ ವಿಚಾರವಾಗಿ ಹೆಚ್ಚು ಓಡಾಡುತ್ತಾನೆ ಎಂದು ದಾಳಿ ಮಾಡಿದ್ದಾರೆ. ಮಚ್ಚುಗಳನ್ನು ಹಿಡಿದುಕೊಂಡು ಬಂದಿದ್ದರು. ಒಂದು ವಾರದಿಂದ ಪ್ಲ್ಯಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಹಿಂದುತ್ವದ ವಿಚಾರವಾಗಿ ಓಡಾಡುತ್ತಿರುವ ಬಗ್ಗೆಯೇ ಹಲ್ಲೆ ಮಾಡಿದ್ದಾರೆ. ನಮ್ಮ ಹುಡುಗರಿಗೂ ಹೊಡೆಯುತ್ತೇವೆ ಎಂದು ಹೇಳಿದ್ದಾರೆ ಎಂದು ಕಾಂತರಾಜು ತಿಳಿಸಿದ್ದಾರೆ.
ಹಿಂದೂ ಸಂಘಟನೆ ಕಾರ್ಯಕರ್ತ ಆಕ್ರೋಶ
ಹಲ್ಲೆ ಘಟನೆ ಖಂಡಿಸಿ ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಹಿಂದೂ ಪರ ಸಂಘಟನೆ ಮುಖಂಡರು, ಕಾರ್ಯಕರ್ತರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಕಾಂತರಾಜು ಆರೋಗ್ಯ ವಿಚಾರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಎಸ್. ದತ್ತಾತ್ರಿ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಡಿಯೋ ಕಾಲ್ ಮೂಲಕ ಕಾಂತರಾಜು ಜತೆ ಮಾತನಾಡಿ, ಆರೋಗ್ಯ ವಿಚಾರಿಸಿದ್ದಾರೆ.