ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು; ಸಿದ್ದರಾಮಯ್ಯ ಹೇಳಿದ್ದೇನು?

ದಾವಣಗೆರೆ, ಜುಲೈ 12: “ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ. ಯಾರು ಸಿಎಂ ಆಗಬೇಕೆಂದು ಹೊಸದಾಗಿ ಆಯ್ಕೆಯಾದ ಶಾಸಕರ ಅಭಿಪ್ರಾಯದ ಮೇಲೆ ತೀರ್ಮಾನಕ್ಕೆ ಬರಲಾಗುತ್ತದೆ” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ ಅವರು ನಾನೇ ಮುಖ್ಯಮಂತ್ರಿ ಎಂದು ಎಲ್ಲಿಯೂ ಹೇಳಿಲ್ಲ. ನನಗೇನೂ ಗೊತ್ತಿಲ್ಲ. ನಿಮಗೇನಾದರೂ ಹೇಳಿದ್ದರಾ?. ನಾವು ಅಧಿಕಾರಕ್ಕೆ ಬರುವ ಬಗ್ಗೆ ಮಾತ್ರ ನಮ್ಮ ಯೋಚನೆ” ಎಂದು ಸ್ಪಷ್ಟಪಡಿಸಿದರು.
ಶಾಮನೂರು ಶಿವಶಂಕರಪ್ಪರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಚುನಾವಣೆಗೆ ಎಂಟು ತಿಂಗಳಿದೆ. ಚುನಾವಣೆಗೂ ನನ್ನ ಜನುಮ ದಿನದ ಆಚರಣೆಗೂ ಸಂಬಂಧ ಇಲ್ಲ. ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ 2023ರ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. 150 ಸ್ಥಾನ ಗೆಲ್ಲಬೇಕೆಂಬ ಗುರಿ ಇದೆ” ಎಂದು ತಿಳಿಸಿದರು.
“ಆಗಸ್ಟ್ 3ಕ್ಕೆ ನನಗೆ 75 ವರ್ಷ ತುಂಬುತ್ತಿದೆ. ಹಾಗಾಗಿ ಅಮೃತ ಮಹೋತ್ಸವ ನಡೆಸಲಾಗುತ್ತಿದೆ. ಇದು ಸಿದ್ಧರಾಮೋತ್ಸವ ಅಲ್ಲ. ಮಾಧ್ಯಮದವರು ಹಾಗೂ ಆರ್‌ಎಸ್‌ಎಸ್‌ನವರು ಈ ರೀತಿ ಕರೆಯುತ್ತಿದ್ದಾರೆ. ಯಾವುದೇ ವ್ಯಕ್ತಿಗೆ 75 ಹಾಗೂ ನೂರು ವರ್ಷದ ಜನುಮ ದಿನದ ಆಚರಣೆ ಒಂದು ಮೈಲಿಗಲ್ಲು. ನಾನು ಹಿಂದೆಯೂ ಹುಟ್ಟು ಹಬ್ಬ ಆಚರಿಸಿಲ್ಲ. ಮುಂದೆಯೂ ಮಾಡಿಕೊಳ್ಳುವುದಿಲ್ಲ. ಈ ಘಳಿಗೆ ಸ್ಮರಣೀಯ ಮಾಡಿಕೊಳ್ಳಬೇಕೆಂಬ ದೃಷ್ಟಿಯಿಂದ ಹಿತೈಷಿಗಳು, ಅಭಿಮಾನಿಗಳು, ಪಕ್ಷದ ನಾಯಕರೆಲ್ಲರೂ ಸೇರಿ ದಾವಣಗೆರೆಯಲ್ಲಿ ಮಾಡುತ್ತಿದ್ದಾರೆ” ಎಂದರು.
“ಮಾಜಿ ಸಚಿವರಾದ ಆರ್. ವಿ. ದೇಶಪಾಂಡೆ, ಕೆ. ಎನ್. ರಾಜಣ್ಣ, ಬಸವರಾಜ ರಾಯರೆಡ್ಡಿ, ಭೈರತಿ ಸುರೇಶ್, ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್, ಹೆಚ್. ಸಿ. ಮಹಾದೇವಪ್ಪ, ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರು, ಅಭಿಮಾನಿಗಳು ಹಾಗೂ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಈ ಕಾರ್ಯಕ್ರಮ ನಡೆಸುತ್ತಿದ್ದಾರೆ” ಎಂದು ಹೇಳಿದರು.
ಚುನಾವಣೆ ಬಂದಾಗ ಕ್ಷೇತ್ರದ ಬಗ್ಗೆ ನಿರ್ಧಾರ
“ಅನೇಕ ಕಡೆ ನಾನು ಸ್ಪರ್ಧೆ ಮಾಡುವಂತೆ ನಾಯಕರು, ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ ನಾನು ಈಗಲೇ ಯೋಚನೆ ಮಾಡಿಲ್ಲ. ಬಾದಾಮಿ, ಕೋಲಾರ, ವರುಣಾ ಸೇರಿದಂತೆ ಬೇರೆ ಬೇರೆ ಕಡೆ ನಿಲ್ಲುವಂತೆ ಆಹ್ವಾನ ನೀಡಲಾಗುತ್ತಿದೆ. ಈಗ ನಾನು ಬಾದಾಮಿ ಶಾಸಕ. ಚುನಾವಣೆ ಬಂದಾಗ ಎಲ್ಲಿ ಸ್ಪರ್ಧೆ ಮಾಡುತ್ತೇನೆ? ಎಂದು ಹೇಳುತ್ತೇನೆ” ಎಂದು ಸಿದ್ದರಾಮಯ್ಯ ಹೇಳಿದರು.
ಹಗರಣ ಮುಚ್ಚಿ ಹಾಕುವ ಪ್ರಯತ್ನ
“ಈಗ ಗೃಹ ಸಚಿವರಾಗಿರುವುದು ಆರಗ ಜ್ಞಾನೇಂದ್ರ. ಈ ಹಿಂದೆ ಹೋಮ್ ಮಿನಿಸ್ಟರ್ ಆಗಿದ್ದು ಬಸವರಾಜ ಬೊಮ್ಮಾಯಿ. ಅವರ ಕಾಲದಲ್ಲಿ ಪಿಎಸ್‌ಐ ನೇಮಕಾತಿ ನಡೆದಿರುವುದು. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷವಾಯಿತಲ್ಲಾ. ಯಾಕೆ ಇನ್ನು ಕಠಿಣ ಕ್ರಮ ತೆಗೆದುಕೊಂಡಿಲ್ಲ. ಪಿಎಸ್‌ಐ ಹಗರಣ ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.
ಸರಕಾರದ ಸಹಕಾರವಿಲ್ಲದೆ ಇಂತಹ ಹಗರಣ ಸಾಧ್ಯವಿಲ್ಲ
“ಯಾವ ರಾಜಕಾರಣಿಗಳು ಭಾಗಿಯಾಗಿದ್ದಾರೋ ಅವರನ್ನು ಪತ್ತೆ ಹಚ್ಚಿಲ್ಲ. ಅಮೃತ್ ಪೌಲ್, ಶಾಂತಕುಮಾರ್ ಅವರನ್ನು ಬಂಧಿಸಲಾಗಿದೆ ಅಷ್ಟೇ. ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ಪಕ್ಷದವರಿದ್ದರೂ ಬಂಧಿಸಲಿ. ಅಂಥವರಿಗೆ ಶಿಕ್ಷೆಯಾಗಬೇಕು. ಸರಕಾರದ ಸಹಕಾರ, ಕುಮ್ಮಕ್ಕು ಇಲ್ಲದೇ ಅಮೃತ್ ಪೌಲ್ ಇಂಥ ಕೆಲಸ ಮಾಡಲು ಸಾಧ್ಯವಿಲ್ಲ ಅಲ್ಲವೇ?. ಬಿಜೆಪಿಯವರು ಈ ಹಿಂದಿನ ಸರಕಾರದಲ್ಲಿ ಹಗರಣ ನಡೆದಿದೆ ಎನ್ನುತ್ತಾರಲ್ಲಾ. ಆಗ ಬಸವರಾಜ ಬೊಮ್ಮಾಯಿ ಕಡಲೇಕಾಯಿ ತಿನ್ನುತ್ತಿದ್ದರಾ? ಆಗ ಪ್ರಶ್ನೆ ಮಾಡದೇ ಈಗ ಆರೋಪ ಮಾಡಿದರೆ ಜನರು ನಂಬುತ್ತಾರೆಯೇ?” ಎಂದು ಪ್ರಶ್ನಿಸಿದರು.
ಬಿಜೆಪಿಯವರು ವ್ಯಂಗ್ಯಕ್ಕೆ ಪ್ರತಿಕ್ರಿಯಿಸಲ್ಲ
“ಸಾಹಿತಿ ದೇವನೂರು ಮಹಾದೇವ ಅವರು ಬರೆದಿರುವ ಆರ್‌ಎಸ್‌ಎಸ್ ಆಳ, ಅಗಲ ಪುಸ್ತಕ ನಾನು ಬರೆಸಿಲ್ಲ. ಅವರು ಕಾಂಗ್ರೆಸ್ ಪಕ್ಷದವರಲ್ಲ, ಬೇರೆ ಪಕ್ಷದವರು. ಒಬ್ಬ ಸಾಹಿತಿ. ನನ್ನ ಸ್ನೇಹಿತ, ಹಿತೈಷಿಗಳು. ಬಿಜೆಪಿಯವರು ವ್ಯಂಗ್ಯವಾಗಿ ಮಾತನಾಡಿದರೆ ಪ್ರತಿಕ್ರಿಯೆ ನೀಡಲ್ಲ” ಎಂದು ಹೇಳಿದರು.
“ಕೆ. ಎಸ್. ಈಶ್ವರಪ್ಪ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಮೆಂಟಲಿ ಈಸ್ ನಾಟ್ ಆಲ್ ರೈಟ್. ಮಂತ್ರಿ ಸ್ಥಾನ ಹೋದ ಮೇಲೆ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದರು.
“ರಾಜ್ಯದಲ್ಲಿ ಭಾರೀ ಮಳೆಯಿಂದ ಪ್ರವಾಹ ಸ್ಥಿತಿ ತಲೆದೋರಿದೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬೆಳೆ ಹಾನಿ ಸೇರಿದಂತೆ ಆಸ್ತಿಪಾಸ್ತಿ ಹಾನಿಯಾಗಿದ್ದರೆ ಕೂಡಲೇ ಪರಿಹಾರ ನೀಡಬೇಕು. ಈಗ ಸರಕಾರದವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ನಾನು ಕೂಡ ಪ್ರವಾಸ ಮಾಡುತ್ತಿದ್ದೇನೆ” ಎಂದು ತಿಳಿಸಿದರು.