ಸಲ್ಮಾನ್ ಅನ್ನು ಕೊಲ್ಲುವುದು ಖಂಡಿತ: ಕೊಲೆ ಬೆದರಿಕೆ ಪ್ರಕರಣ ತನಿಖೆ ನಡೆದಷ್ಟು ಗಂಭೀರವಾಗುತ್ತಾ ಸಾಗುತ್ತಿದೆ. ಪೊಲೀಸರೆದುರೇ ಬೆದರಿಕೆ ಹಾಕಿದ ಭೂಗತ ಪಾತಕಿ

ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಪ್ರಕರಣ ತನಿಖೆ ನಡೆದಷ್ಟು ಗಂಭೀರವಾಗುತ್ತಾ ಸಾಗುತ್ತಿದೆ. ಅದೇ ಪ್ರಕರಣದಲ್ಲಿ ವಿಚಾರಣೆ ಒಳಪಟ್ಟಿರುವ ಭೂಗತ ಪಾತಕಿಯೋರ್ವ ಪೊಲೀಸರ ಎದುರೇ ‘ಸಲ್ಮಾನ್ ಖಾನ್ ಅನ್ನು ಕೊಲ್ಲವುದು ಖಾಯಂ’ ಎಂದು ಹೇಳಿದ್ದಾನೆ!
ಜುಲೈ 03 ರಂದು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರಿಗೆ ಉದ್ಯಾನವೊಂದರಲ್ಲಿ ಬೆದರಿಕೆ ಪತ್ರ ದೊರೆತಿದ್ದು, ಹಾಡುಹಗಲೆ ಹಂತರಿಂದ ಹತರಾದ ಪಂಜಾಬ್‌ನ ಗಾಯಕ ಸಿಧು ಮೂಸೆವಾಲಾ ಗೆ ಆದ ಗತಿಯೇ ಸಲ್ಮಾನ್ ಖಾನ್‌ಗೂ ಆಗುತ್ತದೆ ಎಂಬ ಬೆದರಿಕೆ ಪತ್ರ ಸಲ್ಮಾನ್ ಖಾನ್‌ರ ತಂದೆ ಸಲೀಂ ಖಾನ್‌ಗೆ ದೊರಕಿತ್ತು. ಯಾರೋ ದುರುಳರು ಸಲೀಂ ಖಾನ್ ಅನ್ನು ಕೆಲ ದಿನ ಫಾಲೋ ಮಾಡಿ ಅವರು ದಿನವೂ ಭೇಟಿ ನೀಡಿ ಕುಳಿತುಕೊಳ್ಳುವ ಪಾರ್ಕ್‌ನ ಕಲ್ಲು ಬೆಂಚಿನ ಮೇಲೆ ಆ ಪತ್ರ ಇರಿಸಿದ್ದರು.
ಸಲ್ಮಾನ್ ಖಾನ್‌ಗೆ ಬಂದ ಈ ಬೆದರಿಕೆ ಪತ್ರವನ್ನು ಮುಂಬೈ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಈಗಾಗಲೇ ಜೈಲಿನಲ್ಲಿದ್ದ ಭೂಗತ ಪಾತಕಿ ಲಾರೆನ್ಸ್ ಬಿಶ್ಣೋಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ಗ್ಯಾಂಗ್‌ನ ಇನ್ನು ಕೆಲವು ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನಷ್ಟು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಇದೀಗ ವಿಚಾರಣೆಗೆ ಒಳಪಡಿಸಲಾಗಿರುವ ಲಾರೆನ್ಸ್ ಬಿಶ್ಣೋಯಿ, ವಿಚಾರಣಾ ಅಧಿಕಾರಿಗಳ ಎದುರೇ ಸಲ್ಮಾನ್ ಖಾನ್ ಅನ್ನು ಕೊಲ್ಲುವುದು ಖಂಡಿತ ಎಂದಿದ್ದಾನೆ!
ಲಾರೆನ್ಸ್ ಬಿಶ್ಣೋಯಿಯನ್ನು ವಿಚಾರಣೆ ಮಾಡಲಾಗುತ್ತಿದೆ
ಸಲ್ಮಾನ್ ಖಾನ್‌ಗೆ ಬಂದಿರುವ ಬೆದರಿಕೆ ಪತ್ರದಲ್ಲಿ ಎಲ್‌ಬಿ, ಜಿಬಿ ಎಂಬ ಅಕ್ಷರಗಳಿದ್ದವು ಇವು ಭೂಗತ ಪಾತಕಿಗಳಾದ ಲಾರೆನ್ಸ್ ಬಿಶ್ಣೋಯಿ ಹಾಗೂ ಗೋಲ್ಡಿ ಬ್ರದರ್ಸ್ ಅನ್ನು ಸೂಚಿಸುತ್ತದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣವೊಂದರಲ್ಲಿ ಈಗಾಗಲೇ ಜೈಲಿನಲ್ಲಿರುವ ಲಾರೆನ್ಸ್ ಬಿಶ್ಣೋಯಿಯನ್ನು ವಿಶೇಷ ತನಿಖಾ ತಂಡವು ವಿಚಾರಣೆಗೆ ಒಳಪಡಿಸಿದೆ. ಈ ಸಂದರ್ಭದಲ್ಲಿ ಕೆಲವು ಆಘಾತಕಾರಿ ಸಂಗತಿಗಳು ಹೊರಗೆ ಬಂದಿವೆ.
ಸಮುದಾಯದವರು ಕ್ಷಮಿಸುವುದಿಲ್ಲ: ಬಿಶ್ಣೋಯಿ
ವಿಚಾರಣೆಯಲ್ಲಿ ಮಾತನಾಡಿರುವ ಲಾರೆನ್ಸ್ ಬಿಶ್ಣೋಯಿ, ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಸಾರ್ವಜನಿಕ ಕ್ಷಮಾಪಣೆ ಕೇಳದಿದ್ದರೆ ಬಿಶ್ಣೋಯಿ ಸಮುದಾಯದ ಜನ ಆತನನ್ನು ಕ್ಷಮಿಸುವುದಿಲ್ಲ. ನಾನೂ ಸಹ ಕ್ಷಮಿಸುವುದಿಲ್ಲ. ನಾನು ಅಥವಾ ನನ್ನ ಸಮುದಾಯದ ಜನ ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದು ಖಾಯಂ ಎಂದು ಹೇಳಿದ್ದಾನೆ.
ಸಲ್ಮಾನ್ ವಕೀಲಗೂ ಬೆದರಿಕೆ
ಸಲ್ಮಾನ್ ಖಾನ್‌ಗೆ ಬೆದರಿಕೆ ಬಂದ ಬೆನ್ನಲ್ಲೆ ಕೃಷ್ಣಮೃಗ ಪ್ರಕರಣದಲ್ಲಿ ಸಲ್ಮಾನ್ ಖಾನ್ ಪರ ವಕಾಲತ್ತು ವಹಿಸಿರುವ ಹಸ್ತಿಲಾಲ್ ಸಾರಸ್ವತ್‌ಗೂ ಬೆದರಿಕೆ ಪತ್ರ ಬಂದಿದೆ. ಹಸ್ತಿಲಾಲ್‌ನ ಕಚೇರಿಯ ಬಾಗಿಲಲ್ಲಿ ಪತ್ರವನ್ನು ಇಡಲಾಗಿದ್ದು, ಪತ್ರದಲ್ಲಿ, ‘ಸಿಧು ಮೂಸೆವಾಲಾಗೆ ಆದ ಗತಿಯೇ ನಿನಗೂ ಆಗುತ್ತದೆ. ಶತ್ರುವಿನ ಮಿತ್ರ ಮೊದಲ ಶತ್ರು’ ಎಂದು ಬರೆಯಲಾಗಿತ್ತು. ಈ ಬಗ್ಗೆ ವಕೀಲ ಸಾರಸ್ವತ್ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಜಾರಿಯಲ್ಲಿದೆ.
ಬಾಲ್ಕನಿಗೆ ಬರಲಿಲ್ಲ ಸಲ್ಮಾನ್ ಖಾನ್
ಇನ್ನು ಸಲ್ಮಾನ್ ಖಾನ್, ಬೆದರಿಕೆ ಪತ್ರ ಬಂದಿರುವ ಬಗ್ಗೆ ಯಾರ ಬಗ್ಗೆಯೂ ಅನುಮಾನವಿಲ್ಲ ಎಂದಿದ್ದಾರೆ. ಆದರೆ ಬೆದರಿಕೆ ಪತ್ರ ಬಂದಿರುವ ಕಾರಣ ಸಲ್ಮಾನ್ ಖಾನ್ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಬೆದರಿಕೆ ಪತ್ರದ ಬಳಿಕ ಬಹಿರಂಗವಾಗಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿಲ್ಲ. ಈದ್ ದಿನದಂದೂ ಸಹ ಸಲ್ಮಾನ್ ಖಾನ್ ಮನೆಯ ಬಾಲ್ಕನಿಗೆ ಬಾರದೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಶುಭಾಶಯ ಕೋರಿದರು.