Lalbagh Flower Show 2022 : ಈ ವರ್ಷ ‘ಪವರ್ ಸ್ಟಾರ್’ ಹೆಸರಿನಲ್ಲಿ ಫ್ಲವರ್ ಶೋ

ಬೆಂಗಳೂರು ಜು.12: ನಗರದ ಹೃದಯಭಾಗಲ್ಲಿರುವ ಲಾಲ್‌ಬಾಗ್ ಉದ್ಯಾನದಲ್ಲಿ ಈ ವರ್ಷ ಸ್ವಾತಂತ್ರೋತ್ಸವ ‘ಪುಷ್ಪ ಪ್ರದರ್ಶನ’ವು ದಿವಗಂತ ನಟ ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಡೆಯಲಿದೆ.
ಆಗಸ್ಟ್ 5ರಿಂದ 15ರವರೆಗೆ ಲಾಲ್‌ಬಾಗ್ ಉದ್ಯಾನದಲ್ಲಿ ನಡೆಯಲಿರುವ ಫ್ಲವರ್ ಶೋವನ್ನು ಆಗಸ್ಟ್ 5ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
ಆಗಸ್ಟ್ 15ರ ನಂತರವೂ ಎರಡು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಮುಂದುವರಿಸುವ ಬಗ್ಗೆ ಚಿಂತನೆ ಇದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, “ನಮ್ಮನ್ನಗಲಿದ ಸ್ಯಾಂಡಲ್‌ವುಡ್ ನಟ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಹತ್ತು ದಿನ ಪುಷ್ಪ ಪ್ರದರ್ಶನ ನಡೆಯಲಿದೆ. ಇದನ್ನು ಆಗಸ್ಟ್ 15ರ ನಂತರವು ಎರಡು ದಿನ ಮುಂದುವರಿಸಬೇಕೆಂಬ ಇಚ್ಚೆ ಇದ್ದು, ಯಾವುದು ಅಂತಿಮವಾಗಿಲ್ಲ” ಎಂದರು.
“ಪುಷ್ಪ ಪ್ರದರ್ಶನದಲ್ಲಿ ಈ ಭಾರೀ ವಿದೇಶಿಯ ಬಣ್ಣ ಬಣ್ಣದ ಹೂಗಳು ಕಂಗೊಳಿಸಲಿವೆ. ಕೋವಿಡ್ ನಿಯಮ ಪಾಲನೆ ಸಹಿತಿ ಸಂಭ್ರಮದ ಪುಷ್ಪ ಪ್ರದರ್ಶನ ನಡೆಸಲಾಗುವುದು” ಎಂದು ಸಚಿವರು ಮಾಹಿತಿ ನೀಡಿದರು.
ಬೆಳೆ ನಷ್ಟಕ್ಕೆ ಪರಿಹಾರ?; ಇದೇ ವೇಳೆ ರಾಜ್ಯದಲ್ಲಿ ಸುರಿದ ಭೀಕರ ಮಳೆಯಿಂದ ಉಂಟಾದ ತೋಟಗಾರಿಕೆ ನಷ್ಟ ಕುರಿತು ಮಾತನಾಡಿದ ಮುನಿರತ್ನ, “ಬೆಳೆ ಹಾನಿ ಬಗ್ಗೆ ಪರಿಶೀಲಿಸಿ ಸಂಪೂರ್ಣವಾಗಿ ವರದಿ ನೀಡುವಂತ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ವರದಿ ನೋಡಿಕೊಂಡು ಬೆಳೆ ನಷ್ಟಕ್ಕೀಡಾದವರಿಗೆ ಸರ್ಕಾರದಿಂದ ಸಹಾಯ ಮಾಡಲಾಗುವುದು. ಉಂಟಾದ ನಷ್ಟ ಕುರಿತು ಸರ್ಕಾರ ಪ್ರಾಮಾಣಿಕವಾಗಿ ಪರಿಶೀಲಿಸಿ ಆರ್ಥಿಕ ನಷ್ಟಕ್ಕೀಡಾದವರ ರೈತರ ಕೈ ಹಿಡಿಯಲಿದ್ದೇವೆ” ಎಂದರು.
ಸಿದ್ದುಗೆ ಹುಟ್ಟಿದ ದಿನವೇ ಗೊತ್ತಿಲ್ಲ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟಿದ ಹಬ್ಬದ ಅಂಗವಾಗಿ ನಡೆಯಲಿರುವ ಸಿದ್ಧರಾಮೋತ್ಸವ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, “ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹುಟ್ಟಿದ ದಿನವೇ ಗೊತ್ತಿಲ್ಲ. ಈ ಹಿಂದೆ ಒಬ್ಬರು ಅವರಿಗೆ ಹುಟ್ಟಿದ ದಿನದ ಶುಭಾಶಯ ಕೋರಿದಾಗ ಹೇ ಹೋಗೊ ನಂಗೆ ಹುಟ್ಟಿದ ದಿನವೇ ಗೊತ್ತಿಲ್ಲ ಎಂದಿದ್ದರು. ಸದ್ಯ ಅವರಿಗೆ 75 ವರ್ಷವಾಗಿದ್ದು, ಇದೀಗ ಆಗಸ್ಟ್ 3ರಂದು ಜನ್ಮದಿನ ಎಂದು ಹೇಗೆ ತಿಳಿಯಿತೋ?” ಎಂದು ವ್ಯಂಗ್ಯವಾಡಿದರು.
“ಕೆಪಿಸಿಸಿ ಅಧ್ಯಕ್ಷರು ಒಂದು ಉತ್ಸವ ಮಾಡಿಕೊಂಡರು ಅಚ್ಚರಿ ಇಲ್ಲ. ಹುಟ್ಟು ಹಬ್ಬ ಅವರು (ಸಿದ್ದರಾಮಯ್ಯ) ಮಾಡಿಕೊಳ್ಳುತ್ತಿರುವುದು ಅಲ್ಲ. ಅವರ ಅಕ್ಕ ಪಕ್ಕದಲ್ಲಿರುವವರು ಮಾಡುತ್ತಿರುವುದು” ಎಂದು ಮುನಿರತ್ನ ಪ್ರತಿಕ್ರಿಯಿಸಿದರು.