ಸುಶಾಂತ್ ಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದದ್ದು ರಿಯಾ ಚಕ್ರವರ್ತಿ: NCB

ನವದೆಹಲಿ:ಬಾಲಿವುಡ್ ನಟ, ಪ್ರಿಯತಮ ಸುಶಾಂತ್ ಸಿಂಗ್ ರಜಪೂತ್ ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಶಾಮೀಲಾಗಿರುವುದಾಗಿ ಆರೋಪಪಟ್ಟಿಯಲ್ಲಿ ಎನ್ ಸಿಬಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ನಟ ಸುಶಾಂತ್ ಸಿಂಗ್ ರಜಪೂತ್ 2020ರಲ್ಲಿ ಸಾವನ್ನಪ್ಪಿದ್ದರು. ಸುಶಾಂತ್ ಸಾವು ಬಾಲಿವುಡ್ ಹಾಗೂ ದೇಶಾದ್ಯಂತ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಇದೀಗ ಪ್ರಕರಣದ ಕುರಿತು ಎನ್ ಸಿಬಿ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ರಿಯಾ ಹಾಗೂ ಇತರ 34 ಹೈಪ್ರೊಫೈಲ್ ಆರೋಪಿಗಳನ್ನು ಹೆಸರಿಸಲಾಗಿದೆ ಎಂದು ವರದಿ ವಿವರಿಸಿದೆ.
ಸುಶಾಂತ್ ಸಿಂಗ್ ಗೆ ರಿಯಾ ಚಕ್ರವರ್ತಿಯೇ ಗಾಂಜಾ ಸರಬರಾಜು ಮಾಡುತ್ತಿದ್ದಳು ಎಂದು ಆರೋಪಪಟ್ಟಿಯಲ್ಲಿ ಎನ್ ಸಿಬಿ ತಿಳಿಸಿದೆ. ರಿಯಾ ಚಕ್ರವರ್ತಿ ಮರಿಜುವಾನಾ ಖರೀದಿಸಲು ಆರ್ಥಿಕ ನೆರವು ನೀಡುತ್ತಿದ್ದಳು ಎಂದು ಚಾರ್ಜ್ ಶೀಟ್ ನಲ್ಲಿದೆ. ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಕೂಡಾ ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ರಿಯಾ ಚಕ್ರವರ್ತಿ ಮರಿಜುವಾನಾ ಖರೀದಿಸಿ, ಸುಶಾಂತ್ ಸಿಂಗ್ ಗೆ ನೀಡುತ್ತಿದ್ದಳು ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ 10 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವರದಿ ವಿವರಿಸಿದೆ.