ಮಳೆ ಬರುತ್ತಿದ್ದರೂ ಟಾರ್ಪಲ್ ಬಳಸದೆ ಪಡಿತರ ಅಕ್ಕಿ ಸಾಗಾಟ !

ಶಿವಮೊಗ್ಗ: ಮಳೆ ಇದ್ದರೂ ಪಡಿತರ ಅಕ್ಕಿಯನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮವಹಿಸದೇ ಸಾಗಿಸುತ್ತಿದ್ದ ಲಾರಿ ಚಾಲಕನಿಗೆ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ತರಾಟೆ ತೆಗೆದುಕೊಂಡ ಘಟನೆ ಬುಧವಾರ ಅರಸೀಕೆರೆಯಲ್ಲಿ ನಡೆದಿದೆ.
ಆದಿಚುಂಚನಗಿರಿಯಿಂದ ಶಿವಮೊಗ್ಗಕ್ಕೆ ಬರುತ್ತಿರುವ ವೇಳೆ ಲಾರಿಯಲ್ಲಿ ಯಾವುದೇ ಟಾರ್ಪಲ್ ಇಲ್ಲದೆ ಪಡಿತರ ಅಕ್ಕಿ ಸಾಗಿಸುತ್ತಿದ್ದದ್ದು ಕಣ್ಣಿಗೆ ಬಿದ್ದಿದೆ.
ತಕ್ಷಣ ಲಾರಿಯನ್ನು ಪಕ್ಕಕ್ಕೆ ನಿಲ್ಲಿಸಿ ಚಾಲಕನಿಗೆ ತರಾಟೆಗೆ ತೆಗೆದುಕೊಂಡು ಟಾರ್ಪಲ್ ಹಾಕಿಕೊಂಡು ಹೋಗುವಂತೆ ತಿಳಿ ಹೇಳಿದ್ದಾರೆ. ಜತೆಗೆ ಘಟನೆಯನ್ನು ಹಾಸನ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದಾರೆ.
ರೈತರು ವರ್ಷವಿಡೀ ಕಷ್ಟಪಟ್ಟು ದುಡಿದು ಲಾಭ ನಷ್ಟದ ಕುರಿತು ಯೋಚಿಸದೆ ಬೆಳೆದ ಬೆಳೆಯನ್ನು ಮಾರಾಟ ಮಾಡುತ್ತಾರೆ. ಆದರೆ ಅದನ್ನು ಸರಿಯಾದ ಕ್ರಮದಲ್ಲಿ ಸಂಸ್ಕರಣೆ ಮಾಡಿ ಸೊಸೈಟಿಗೆ ತಲುಪಿಸಬೆಕಾದ ದಲ್ಲಾಳಿಗಳ ಸೋಮಾರಿತನದಿಂದ ಇಂತಹ ಘಟನೆ ಸಂಭವಿಸಿದೆ. ಇಂದು ದೇಶದ ರೈತರಿಗೆ ಮಾಡುವ ಅವಮಾನ ಹಾಗೂ ಸರಕಾರಕ್ಕೆ ಮಾಡುವ ಮೋಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿ ಅರಸೀಕೆರೆಯಿಂದ ಕುರುವಂಕ ಸೊಸೈಟಿಗೆ ಹೋಗುತಿತ್ತು.