ಧಾರವಾಡ: ಮೆದುಳು ನಿಷ್ಕ್ರಿಯ, ಅಂಗಾಂಗ ನೀಡಿ ಜೀವದಾನ ಮಾಡಿದ ಮಹಿಳೆ

ಧಾರವಾಡ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗಳು ಹಲವರಿಗೆ ಜೀವದಾನ ಮಾಡಿವೆ.
ಧಾರವಾಡದ ಗೌರವ್ವ ಕೆಲಗೇರಿ (48) ಎಂಬುವವರು ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಬಳಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.
ಇವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಹೀಗಾಗಿ ಇವರನ್ನು ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದ ಕಾರಣ ಗೌರವ್ವ ಅವರ ಮೆದುಳು ನಿಷ್ಕ್ರಿಯೆಗೊಂಡಿತ್ತು. ವೈದ್ಯರು ಮನವೊಲಿಸಿದ ಪರಿಣಾಮ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಮುಂದಾದರು.
ಇದರ ಪರಿಣಾಮ ಯಕೃತ್ ಮತ್ತು ಹೃದಯ ಕವಾಟಗಳನ್ನು ಕ್ರಮವಾಗಿ ಬೆಂಗಳೂರಿನ ಸ್ಪರ್ಶ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಿಗೆ ವಿಮಾನ ಮೂಲಕ ಕಳುಹಿಸಲಾಯಿತು. ಎರಡು ಮೂತ್ರಪಿಂಡಗಳಲ್ಲಿ ಒಂದನ್ನು ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಕಸಿ ಮಾಡಲಾಯಿತು. ಮತ್ತೊಂದನ್ನು ಝೀರೊ ಟ್ರಾಫಿಕ್ ಮೂಲಕ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಾಗಿ ಕಳುಹಿಸಲಾಯಿತು.
ಅಂಗಾಂಗ ಸಾಗಿಸುತ್ತಿದ್ದ ವಾಹನಕ್ಕೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.