ಲಂಚ ಸ್ವೀಕರಿಸಿದ್ದ ಆರೋಗ್ಯ ಅಧಿಕಾರಿ ಎಸಿಬಿ ಬಲೆಗೆ

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಿಂದ ಪೋನ್ ಪೇ ಮೂಲಕ ಲಂಚ ಸ್ವೀಕರಿಸಿದ್ದ ಬೆಳಗಾವಿಯ ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಪ್ರಥಮ ದರ್ಜೆ ಸಹಾಯಕ ಬೀಮರಾವ್ ಈರಪ್ಪ ಮಾದರ್ ಎರಡು ಸಾವಿರ ರೂಪಾಯಿ ಪೋನ್ ಪೇ ಮೂಲಕ ಲಂಚ ಸ್ವೀಕರಿಸಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿರುವ ಅಧಿಕಾರಿ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಠೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ 30 ವರ್ಷ ಸೇವೆ ಸಲ್ಲಿಸಿರುವ ಶ್ರೀಮತಿ ಕೆ.ಎಸ್.ಕುಳಲಿ ಅವರ ಬಳಿ ಒಂದು ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಲು ಆರೋಪಿ ಬೀಮರಾವ್ ಈರಪ್ಪ ಮಾದರ್ 2 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದರನ್ವಯ ಇದೇ ಜುಲೈ 14ರಂದು ಪೋನ್ ಪೇ ಮೂಲಕ 2 ಸಾವಿರ ರೂಪಾಯಿ ಲಂಚವನ್ನು ಪಡೆದುಕೊಂಡಿದ್ದರು. ಈ ಬಗ್ಗೆ ಎಸಿಬಿ ಅಧಿಕಾರಿಗಳ ಬಳಿ ಶ್ರೀಮತಿ ಕೆ.ಎಸ್.ಕುಳಲಿ ಅವರ ಪುತ್ರ ಸಂತೋಷ ಚೌಧರಿ ಎಸಿಬಿ ಅಧಿಕಾರಿಗಳ ಬಳಿ ದೂರು ನೀಡಿದ್ದರು. ಬಳಿಕ ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ನಂತರ ಆರೋಪಿಯ ಮೊಬೈಲ್ ಫೋನ್‍ನನ್ನು ವಶಕ್ಕೆ ಪಡೆದುಕೊಂಡು ಅಧಿಕಾರಿಗಳನ್ನು ತನಿಖೆಯನ್ನು ಮುಂದುವರಿಸಿದ್ದಾರೆ.
ಎಸಿಬಿಯ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸ್ ಉಪ ಅಧೀಕ್ಷಕ ಜೆ.ಎಮ್.ಕರುಣಾಕರಶೆಟ್ಟಿ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ದಾಳಿಯಲ್ಲಿ ಪೊಲೀಸ್ ನಿರೀಕ್ಷಕ ಎ.ಎಸ್.ಗೂದಿಗೊಪ್ಪ ಹಾಗೂ ಬೆಳಗಾವಿ ಎಸಿಬಿ ಠಾಣೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.