ಭದ್ರಾ ಜಲಾಶಯ ಭರ್ತಿಯಾಗಿದ್ದು, ನದಿಗೆ 12 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಶಿವಮೊಗ್ಗ, ಜುಲೈ 14: ಭದ್ರಾ ಜಲಾಶಯ ಭರ್ತಿಯಾಗಿದ್ದು, ನಾಲ್ಕು ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರನ್ನು ಬಿಡುಗಡೆ ಮಾಡಲಾಗಿದೆ. ಗುರುವಾರ ಜಲಾಶಯದಿಂದ 12 ಸಾವಿರ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.
ಭದ್ರಾ ಜಲಾಶಯಕ್ಕೆ 43,051 ಸಾವಿರ ಕ್ಯೂಸೆಕ್ ಒಳ ಹರಿವು ಇದೆ.
ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದೆ. ಗುರುವಾರ 183.2 ಅಡಿಯಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ 12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾದಂತೆ ಹೊರ ಹರಿವು ಪ್ರಮಾಣ ಏರಿಕೆಯಾಗಲಿದೆ. ಪ್ರಸ್ತುತ ಅರ್ಧ ಅಡಿಯಷ್ಟು ಮಾತ್ರ ಗೇಟನ್ನು ಮೇಲೆ ಎತ್ತಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, “ಭದ್ರಾ ಜಲಾಶಯ ಇಷ್ಟು ಬೇಗ ಭರ್ತಿಯಾಗಿರುವುದು ಖುಷಿಯ ವಿಚಾರ. ಇಷ್ಟು ಬೇಗ ಗೇಟ್ ಮೂಲಕ ನೀರು ಬಿಟ್ಟಿರುವುದು ಇದೇ ಮೊದಲು. ನೀರಿನ ಪ್ರಮಾಣ ಹೆಚ್ಚಳವಾದಂತೆ ಹೊರ ಹರಿವು ಸಹ ಏರಿಕೆಯಾಗಲಿದೆ” ಎಂದು ತಿಳಿಸಿದರು.
ಇದಕ್ಕೂ ಮೊದಲು ಪವಿತ್ರಾ ರಾಮಯ್ಯ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದರು. ಬಳಿಕ ಪೂಜೆ ಸಲ್ಲಿಸಿ ನಾಲ್ಕು ಗೇಟುಗಳನ್ನು ಮೇಲೆತ್ತಲಾಯಿತು. ಇನ್ನು, ಭದ್ರಾ ಜಲಾಶಯದಿಂದ ನೀರು ಹೊರ ಬಿಡುವ ವಿಚಾರ ತಿಳಿದು ಸುತ್ತಮುತ್ತ ಗ್ರಾಮದ ಜನರು ಡ್ಯಾಂ ಬಳಿಗೆ ಬಂದಿದ್ದರು. ಪ್ರತಿ ಗೇಟ್ ಮೇಲೆತ್ತಿದಾಗಲೂ ಜನರು ಖುಷಿಯಿಂದ ಚಪ್ಪಾಳ ತಟ್ಟಿ, ಶಿಳ್ಳೆ ಹೊಡೆದು ಸಂಭ್ರಮಿಸಿದರು.
ಭದ್ರಾ ಜಲಾಶಯದಿಂದ ಎಡದಂಡೆ ನಾಲೆಯಲ್ಲಿ 150 ಕ್ಯೂಸೆಕ್ ಹಾಗೂ ಬಲದಂಡೆ ನಾಲೆಯಲ್ಲಿ 1000 ಕ್ಯೂಸೆಕ್ ನೀರನ್ನು ಹರಿಸಲು ಬುಧವಾರ ನಡೆದ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ; ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವುದರಿಂದ ನದಿಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರು ಮೇಯಿಸುವುದನ್ನು ನಿಷೇಧಿಸಲಾಗಿದೆ.
ನದಿಯ ಎಡ ಮತ್ತು ಬಲದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಜಿ. ಎಸ್. ಪಟೇಲ್ ತಿಳಿಸಿದ್ದಾರೆ.