fbpx
Crime NewsKarnataka NewsNational

ಕುಖ್ಯಾತ ರೌಡಿ ಹಂದಿ ಅಣ್ಣಿ ಭೀಕರ ಕೊಲೆ: ಯಾರು ಈ ಹಂದಿ ಅಣ್ಣಿ

ಹಾಡಹಗಲೇ ಶಿವಮೊಗ್ಗವನ್ನು ಬೆಚ್ಚಿ ಬೀಳಿಸಿರುವ ರೌಡಿಗಳ ಅಟ್ಟಹಾಸ, ಬೆಂಗಳೂರಿನಿಂದ ಸುಪಾರಿ ಹಂತಕರು ಬಂದಿರುವ ಶಂಕೆ : ಚುರುಕಾದ ತನಿಖೆ

ಶಿವಮೊಗ್ಗ,ಜು.14: ಎಡಬಿಡದೆ ಸುರಿಯುತ್ತಿರುವ ರಚ್ಚೆ ಹಿಡಿದ ಮಳೆಯಿಂದ ಬೇಸತ್ತ ಶಿವಮೊಗ್ಗದಲ್ಲಿ ಗುರುವಾರ ಹಾಡಹಗಲೇ ಸುರಿವ ಮಳೆಯಲ್ಲಿಯೇ ರೌಡಿ ಅಣ್ಣಿ ಆಲಿಯಾಸ್ ಹಂದಿ ಅಣ್ಣಿ(35 )ಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿ ಯಾಗಿದ್ದಾರೆ.

ವಿನೋಬನಗರ ಪೊಲೀಸ್ ಠಾಣೆಗೆ ಹೊಂದಿಕೊಂಡೇ ಇರುವ ಪೊಲೀಸ್ ಚೌಕಿಯಲ್ಲಿ ಸಿನೀಮೀಯ ರೀತಿಯಲ್ಲಿ ಅಟ್ಟಾಡಿಸಿಕೊಂಡು ಬಂದು ಮಚ್ಚು ಬೀಸಿದ ಈ ಘಟನೆ ಇಡೀ ಮಲೆನಾಡನ್ನೇ ಬೆಚ್ಚಿ ಬೀಳಿಸಿದೆ. ಬೆಳಗ್ಗೆ  10.45  ರ ಸಮಯದಲ್ಲಿ ವಿನೋಬನಗರ ಪೊಲೀಸ್ ಚೌಕಿಯ ಜನನಿಬಿಡ ಪ್ರದೇಶದಲ್ಲಿಯೇ ಈ ಭೀಕರ ಕೊಲೆ ನಡೆದಿದೆ.

ಬೈಕಿನಲ್ಲಿ ಹೋಗುತ್ತಿದ್ದ ಅಣ್ಣಿಯ ಹೋಂಡಾ ಆಕ್ಟಿವ್ ಬೈಕ್‌ಗೆ ಹಿಂದಿನಿಂದ ವಾಹನ ಡಿಕ್ಕಿಹೊಡೆಸ ಲಾಗಿದೆ. ಹೀಗಾಗುತ್ತಿದ್ದಂತೆ ಅಟ್ಯಾಕಿಂಗ್ ಸೂಚನೆ ಸಿಕ್ಕ ಅಣ್ಣಿ ಗಾಡಿ ಬಿಟ್ಟು ಓಡಲಾರಂಭಿಸಿದ್ದಾನೆ. ಜತೆಗಿದ್ದ ಸ್ನೇಹಿತರಾದ ರಘು ಮತ್ತು ಹರೀಶ್ ಓಡಿದ್ದಾರೆ.  ಬೆನ್ನತ್ತಿದ ದುಷ್ಕರ್ಮಿಗಳು ಪೊಲೀಸ್ ಚೌಕಿ ಸಮೀಪ ರಸ್ತೆಯಲ್ಲಿ ಸುಮಾರು ನೂರು ಮೀಟರ್ ಅಟ್ಟಾಡಿಸಿಕೊಂಡು ಹೋಗಿದ್ದಾರೆ. ತಪ್ಪಿಸಿಕೊಳ್ಳುವ ಉದ್ದೇಶದಿಂದ ಪೊಲೀಸ್ ಠಾಣೆ ಕಡೆ ಓಡುತಿದ್ದ ಅಣ್ಣಿಯನ್ನು ಸುತ್ತುವರಿದ ಏಳು ಮಂದಿ ದುಷ್ಕರ್ಮಿಗಳು ಮಾರಾಕಾಸ್ತ್ರ ಗಳಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರ ಸ್ವರೂಪದ ಗಾಯಗಳಾದ ಅಣ್ಣಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿ ಗಳು ನೋಡನೋಡುತ್ತಲೇ ರೌಡಿ ಅಣ್ಣಿಯನ್ನು ಹತ್ಯೆ ಮಾಡಿ ಅದೇ ವಾಹನದಲ್ಲಿ ಪರಾರಿಯಾಗಿದ್ದಾರೆ.

ಯಾರು ಈ ಹಂದಿ ಅಣ್ಣಿ:

ಶಿವಮೊಗ್ಗದ ಸಾಗರ ಗೇಟ್ ಬಳಿ ಹಂದಿ ಮಾಂಸದ ಹೋಟೆಲ್ ಇಟ್ಟುಕೊಂಡಿದ್ದ ಹಂದಿ ಅಣ್ಣಿ ಕುಖ್ಯಾತ ಅವಳಿ ರೌಡಿಗಳಾಗಿದ್ದ ಲವ-ಕುಶರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಬಳಿಕ ಶಿವಮೊಗ್ಗದ ಕ್ರೈಂ ಜಗತ್ತಿನಲ್ಲಿ ಏಕಾಏಕಿ ಪ್ರವರ್ಧಮಾನಕ್ಕೆ ಬಂದಿದ್ದ. ಅವಳಿ ಸಹೋ ದರರನ್ನು ಕೊಲೆ ಮಾಡಿದ ಅಣ್ಣಿ ರಾಜ್ಯಮಟ್ಟದಲ್ಲೂ ಸುದ್ದಿಯಾಗಿದ್ದ. ಕೊಲೆ ಮಾಡಿ ಬೆಂಗಳೂರಿನಲ್ಲಿ ಆಶ್ರಯ ಪಡೆದು ಅಲ್ಲಿಯೇ ಪೊಲೀಸರಿಗೆ ಶರಣಾಗಿದ್ದು, ಆಗ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣದ ಬಳಿಕ ಕೆಲವರ್ಷ ಜೈಲಿನಲ್ಲಿದ್ದ ಅಣ್ಣಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಅವಳಿ ಸೋದರರ ಕೊಲೆ ಪ್ರಕರಣದ ಬಳಿಕ ಶಿವಮೊಗ್ಗದ ರೌಡಿವಲಯದಲ್ಲಿ ತನ್ನದೇ ಆದ ಹವಾ ಹೊಂದಿದ್ದ ಅಣ್ಣಿ ರಿಯಲ್ ಎಸ್ಟೇಟ್, ಮರಳುಗಾರಿಕೆ ಹಫ್ತಾ ವಸೂಲಿ  ಇತ್ಯಾದಿ ಡೀಲ್‌ಗಳಲ್ಲಿಯೇ ಭಾಗಿಯಾ ಗಿದ್ದ. ಡಬಲ್ ಮರ್ಡರ್ ಬಳಿಕ ಅಣ್ಣಿ ಶಿವಮೊಗ್ಗದವನೇ ಆದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹೆಬ್ಬೆಟ್ ಮಂಜನ ಸಂಪರ್ಕಕ್ಕೆ ಬಂದು ಅವನ ಕೆಲಸಗಳನ್ನು ಮಾಡುತಿದ್ದ ಎಂದು ಹೇಳಲಾಗಿದೆ.

. ಎರಡು ವರ್ಷದಿಂದ ತನ್ನ ತಮ್ಮ ಹಂದಿ ಗಿರೀಶ್‌ನನ್ನು ನಸ್ರು ಗ್ಯಾಂಗ್ ಕೊಲೆ ಮಾಡಿತ್ತು. ಇದಾದ ಬಳಿಕ ಮಾನಸಿಕವಾಗಿ ಕುಗ್ಗಿಹೋಗಿದ್ದ ಅಣ್ಣಿ ರೌಡಿ ಚಟುವಟಿಕೆ ಯಿಂದ ದೂರವೇ ಇದ್ದ ಎನ್ನಲಾಗಿದೆ.

ಲ್ಯಾಂಡ್ ಡೀಲ್ ಕಂಟಕವಾಯಿತೇ ? 

ರೌಡಿಸಂ ಬೇಡ ಎಂದರೂ ಅದು ಅಣ್ಣಿಯನ್ನು ಬಿಡಲಿಲ್ಲ. ಇತ್ತೀಚೆಗೆ ಹೆಬ್ಬೆಟ್ ಮಂಜ ಶಿವಮೊಗ್ಗದ ಲೇಔಟ್ ವ್ಯವಹಾರದಲ್ಲಿ ಹೈ ಹಾಕಿದ್ದು, ಫಾಸ್ಟರ್ ಒಬ್ಬರಿಗೆ ಸೇರಿದ್ದ ನಿವೇಶನಗಳ ವಿಚಾರಕ್ಕೆ ಕೈಹಾಕಿದ್ದ ಎನ್ನಲಾಗಿದೆ. ಇದೇ ಪ್ರಕರಣದಲ್ಲಿ ನವಲೆ ಆನಂದ ಮಧ್ಯಪ್ರವೇಶ ಮಾಡಿದ್ದ ಆದರೆ ಅಂತಿಮವಾಗಿ ಮಂಜನ ಕೈ ಮೇಲಾಗಿತ್ತು. ಈ ಪ್ರಕರಣದಿಂದಾಗಿ ಆನಂದನಿಗೂ ಅಣ್ಣಿ ಮೇಲೆ ಕೋಪ ಇತ್ತು ಎನ್ನಲಾಗಿದೆ.

ಈ ಪ್ರಕರಣವಾದ ಮೇಲೆ ತಿಂಗಳ ಹಿಂದೆ ಹಂದಿ ಅಣ್ಣಿ ಮನೆ ಮೇಲೆ ಒಮ್ಮೆ ಅಟ್ಯಾಕ್ ಆಗಿತ್ತು. ಈ ಬಗ್ಗೆ ಪೊಲೀಸರಿಗೆ ಅಣ್ಣಿ ದೂರು ನೀಡಿದ್ದ. ಅಲ್ಲಿ ಪೊಲೀಸ್ ಅಕಾರಿಗಳು ನಿನ್ನ ಮೇಲೆ ರಿವೇಂಜ್ ನಡೆಯುವ ಸಾಧ್ಯತೆಯಿದೆ ಹುಷಾರಾಗಿರು ಯಾವುದೇ ಅಪರಾಧ ಚಟುವಟಿಕೆ ನಡೆಸದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಹಲವರ ಮೇಲೆ ಅನುಮಾನ:

ಹಂದಿ ಅಣ್ಣಿ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಿರುವ ಪೊಲೀಸರು ಹಲವರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ತಮ್ಮ ಗಿರೀಶ್ ಸಾವಿಗೆ ಸೇಡು ತೀರಿಸಿಕೊಳ್ಳುವ ಸಾಧ್ಯತೆ ಇದ್ದ ಕಾರಣ ನಸ್ರು ಗ್ಯಾಂಗೇ ಇವನ ಮೇಲೆ ಅಟ್ಯಾಕ್ ಮಾಡಿರಬಹುದೆ ಎಂಬ ಅನುಮಾನದ ಮೇಲೂ ತನಿಖೆ ಮಾಡುತ್ತಿದೆ. ಶಿವಮೊಗ್ಗದಲ್ಲಿ ಎರಡು ವರ್ಷದ ಹಿಂದೆ ಹರಿಗೆ ಬಳಿ ಕೊಲೆಯಾಗಿದ್ದ ಬಂಕ್ ಬಾಲು ಶಿಷ್ಯರು ಈ ಕೊಲೆ ಮಾಡಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲಾಗಿದೆ. ಕೊಲೆ ಮಾಡಿರುವ ದುಷ್ಕರ್ಮಿಗಳ ಚಲನವಲನ ಬೆಂಗಳೂರಿನ ಹುಡುಗರ ರೀತಿಯಲ್ಲಿಯೇ ಇತ್ತು ಎಂದು ಹೇಳುವ ಪೊಲೀಸರು, ಬಂಕ್ ಬಾಲು ಬೆಂಗಳೂರಿನ ಹುಡುಗರ ಸಂಪರ್ಕದಲ್ಲಿದ್ದ ಅಲ್ಲಿನ ಹುಡುಗರೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂಬ ಆಂಗಲ್ ನಿಂದಲೂ ತನಿಖೆ ಮುಂದುವರಿದಿದೆ.

ಲವ-ಕುಶ ಕೊಲೆಗೆ ಸೇಡು? 

ಅವಳಿ ಸೋದರರಾದ ಲವ-ಕುಶ ಕೊಲೆ ಪ್ರಕರಣದ ಸೇಡಿಗಾಗಿ ಈ ಕೊಲೆ ನಡೆದಿದೆಯೇ ಎಂಬ ಒಂದು ಅನುಮಾನವೂ ಇದೆ. ಅವಳಿ ಸೋದರರ ಕೊಲೆಯಾದ ಬಳಿಕ ಅವರೊಂದಿಗೆ ಇದ್ದ ಅನೇಕ ಹುಡುಗರು ಬೆಂಗಳೂರು ಮತ್ತು ಮಂಗಳೂರಿನ ಭೂಗತ ಜಗತ್ತಿನಲ್ಲಿ ಸಕ್ರಿಯವಾಗಿದ್ದರು. ಅವರು ಈ ಕೃತ್ಯ ಎಸಗಿರಬಹುದೆ ಎಂಬ ನೆಲೆಯಲ್ಲಿಯೂ ತನಿಖೆ ನಡೆದಿದೆ. ಇದೂ ಅಲ್ಲದೆ ಶಿವಮೊಗ್ಗದಲ್ಲಿನ ರಿಯಲ್ ಎಸ್ಟೇಟ್ ಮತ್ತು ಮರಳು ಮಾಫಿಯಾದಲ್ಲಿನ ವ್ಯವಹಾರದ ಕಾರಣ ಯಾರೊ ಸ್ಥಳೀಯ ರೌಡಿಗಳು ಕೊಲೆ ಮಾಡಿಸಿದ್ದಾರೆಯೇ ಎಂಬ ಅನುಮಾನವೂ ಪೊಲೀಸರನ್ನು ಕಾಡುತ್ತಿದೆ.

ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿಯೇ ಕೊಲೆ ನಡೆದಿರುವುದರಿಂದ ಆ ಪ್ರದೇಶದಲ್ಲಿರುವ ಸಿಸಿ ಟಿವಿ ಫೂಟೇಜ್ ಪಡೆದಿರುವ ಪೊಲೀಸರು ಆರೋಪಿಗಳ ಬೆನ್ನುಬಿದ್ದಿದ್ದಾರೆ.

ಸ್ಟೇಟಸ್‌ನಲ್ಲೇನಿತ್ತು.? 

ಈ ನಡುವೆ ಅಣ್ಣಿ ತನ್ನ ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿ ನನ್ನನ್ನು ಯಾರೂ ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂಬ ಸಂದೇಶ ಹಾಕಿಕೊಂಡಿದ್ದ . ಈ ಸಂದೇಶ ಅಪ್ ಡೇಟ್ ಆಗಿರುವ ಹದಿನೈದು ನಿಮಿಷದಲ್ಲಿಯೇ ಕೊಲೆ ನಡೆದಿದೆ ಎನ್ನಲಾಗಿದೆ. ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: