ಇಂದು ಬಿಡುಗಡೆ ಆಗುತ್ತಿರುವ ಕನ್ನಡ ಸಿನಿಮಾಗಳ ಪಟ್ಟಿ

ಕನ್ನಡ ಚಿತ್ರರಂಗದಲ್ಲಿ ಈ ಅರ್ಧ ವರ್ಷದಲ್ಲಿ ಗೆದ್ದ ಸಿನಿಮಾಗಳೆಷ್ಟು, ಬಿದ್ದವೆಷ್ಟು ಎಂದು ಲೆಕ್ಕಾ ಹಾಕುತ್ತಿರುವ ಹೊತ್ತಿಗೆ ಮತ್ತೊಂದು ಶುಕ್ರವಾರ ಬಂದಿದೆ. ಇನ್ನೊಂದಿಷ್ಟು ಕನ್ನಡ ಸಿನಿಮಾಗಳನ್ನು ಹೊತ್ತು ತಂದಿದೆ.
‘ಕೆಜಿಎಫ್ 2’, ‘777 ಚಾರ್ಲಿ’, ‘ಲವ್ ಮಾಕ್ಟೆಲ್ 2’, ‘ಜೇಮ್ಸ್’ ಇನ್ನೂ ಹಲವು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದ ಬೆನ್ನಲ್ಲೆ ಕನ್ನಡ ಚಿತ್ರರಂಗ ಗರಿಗೆದರಿದ್ದು, ಹಲವು ಉತ್ತಮ ಸಿನಿಮಾಗಳು ತೆರೆಗೆ ಬರುತ್ತಿವೆ.
ಹಲವು ಹೊಸಬರ ಸಿನಿಮಾಗಳು ಸಹ ಒಂದರ ಹಿಂದೊಂದು ತೆರೆಗೆ ಬರುತ್ತಿರುವುದು ಸಹ ಗಮನಾರ್ಹ.
ಆಷಾಡ, ಸತತ ಮಳೆ ಯಾವುದನ್ನೂ ಲೆಕ್ಕಿಸದೆ ಈ ಶುಕ್ರವಾರ ಹಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಒಂದಕ್ಕಿಂತಲೂ ಒಂದು ಭಿನ್ನ ಜಾನರ್‌ನ ಸಿನಿಮಾಗಳು ಈ ವಾರ ಬರುತ್ತಿದ್ದು, ನಿಮ್ಮ ಆಯ್ಕೆ ಯಾವುದಾಗಿರಲಿದೆ? ಸುದ್ದಿ ಓದಿ, ಕಮೆಂಟ್ ಮಾಡಿ…
ಸತೀಶ್ ನೀನಾಸಂ ನಟನೆಯ ‘ಪೆಟ್ರೊಮ್ಯಾಕ್ಸ್’
ಸತೀಶ್ ನೀನಾಸಂ, ಹರಿಪ್ರಿಯ, ನಾಗಭೂಷಣ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಇನ್ನಿತರರು ನಟಿಸಿರುವ ‘ಪೆಟ್ರೊಮ್ಯಾಕ್ಸ್’ ಸಿನಿಮಾ ಜುಲೈ 15 ಕ್ಕೆ ಬಿಡುಗಡೆ ಆಗಲಿದೆ. ವಿಜಯಪ್ರಸಾದ್ ನಿರ್ದೇಶನ ಮಾಡಿರುವ ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿನಿಮಾವು ನಾಳೆ ಚಿತ್ರಮಂದಿರದಲ್ಲಿ ತೆರೆಗೆ ಬರಲಿದೆ.
ಅಣ್ಣ-ತಂಗಿಯ ಭಾವುಕ ಬಾಂಧವ್ಯದ ‘ಬೆಂಕಿ’
ಅಣ್ಣ-ತಂಗಿಯ ಭಾವುಕ ಕತೆಯುಳ್ಳ ಆಕ್ಷನ್ ಭರಿತ ಕೌಟುಂಬಿಕ ಕತೆಯುಳ್ಳ ಸಿನಿಮಾ ‘ಬೆಂಕಿ’ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಅನೀಶ್ ನಾಯಕ ನಟನಾಗಿ ನಟಿಸಿರುವ ಈ ಸಿನಿಮಾದಲ್ಲಿ ನಾಯಕನ ತಂಗಿಯ ಮಾತ್ರವೂ ಪ್ರಧಾನಾವಿದ್ದು ಈ ಪಾತ್ರದಲ್ಲಿ ಬೆಳಗಾವಿ ಬೆಡಗಿ ಶ್ರುತಿ ಪಾಟೀಲ್ ನಟಿಸಿದ್ದಾರೆ. ಜೊತೆಗೆ ಸಂಪದ ಹುಲಿವಾನ ಸಹ ಇದ್ದಾರೆ. ಸಿನಿಮಾವನ್ನು ಶಾನ್ ನಿರ್ದೇಶನ ಮಾಡಿದ್ದಾರೆ.
ಥ್ರಿಲ್ಲರ್ ಕತೆಯುಳ್ಳ ‘ಚೇಸ್’ ಸಿನಿಮಾ
ನಿಗೂಢ ಥ್ರಿಲ್ಲರ್ ಕತೆಯನ್ನು ಒಳಗೊಂಡ ‘ಚೇಸ್’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. 2019 ರಲ್ಲಿಯೇ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್ ಕುತೂಹಲ ಕೆರಳಿಸುತ್ತಿದೆ. ಸೈಕೋಪಾಥ್ ಹಂತಕ, ಪೊಲೀಸ್ ಹಾಗೂ ಇನ್ನಿತರ ಪಾತ್ರಗಳ ನಡುವೆ ನಡೆವ ಕತೆ ಇದಾಗಿದೆ. ಸಿನಿಮಾವನ್ನು ವಿಲೋಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.
ಭಿನ್ನ ಕಥಾಹಂದರದ ‘ಕರ್ಮಣ್ಯೆ ವಾಧಿಕಾರಸ್ತೆ’
ಜ್ಯೋತಿಷ್ಯ, ದೈವ, ವಿಜ್ಞಾನ ಇನ್ನಿತರೆ ಅಂಶಗಳನ್ನು ಸೇರಿಸಿ ಹೆಣೆಯಲಾದ ಕತೆಯುಳ್ಳ ಹೊಸ ಸಿನಿಮಾ ‘ಕರ್ಮಣ್ಯೆ ವಾಧಿಕಾರಸ್ತೆ’ ಶುಕ್ರವಾರ ಜುಲೈ 15 ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಪ್ರತೀಕ್ ಸುಬ್ರಹ್ಮಣ್ಯ, ದಿವ್ಯಾ, ಸಿರಿಂಗ್ ಸೆಂಬಾ, ನಾಟ್ಯ ರಂಗ, ಉಗ್ರಂ ಮಂಜು ಸೇರಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಹರಿ ಆನಂದ್. ನಿರ್ಮಾಣ ರಮೇಶ್ ರಾಮಯ್ಯ.
ಆಕ್ಷನ್ ಭರಿತ ಪ್ರೇಮಕತೆ ‘ಪದ್ಮಾವತಿ’
‘ಪದ್ಮಾವತಿ’ ಕನ್ನಡ ಸಿನಿಮಾ ಜುಲೈ 15 ರಂದು ಬಿಡುಗಡೆ ಆಗಲಿದೆ. ಸಿನಿಮಾವು ಆಕ್ಷನ್ ಭರಿತ ಪ್ರೇಮಕತೆ ಹೊಂದಿದೆ. ಸಿನಿಮಾದಲ್ಲಿ ವಿಕ್ರಂ ಆರ್ಯ, ಸಾಕ್ಷಿ ಮೇಘನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಮಿಥುನ್ ಚಂದ್ರಶೇಖರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ದಾಮೋಧರ್ ರಾವ್ ಪರಾಜೆ, ನಾಮದೇವ್. ಸಂಗೀತ ನೀಡುವುದು ದಿನೇಶ್ ಕುಮಾರ್.
ಕಾಲೇಜು ಪ್ರೇಮಕತೆ ‘ಓಹ್ ಮೈ ಲವ್
ಕಾಲೇಜು ಹುಡುಗರ ಪ್ರೇಮಕತೆಯುಳ್ಳ ‘ಓಹ್ ಮೈ ಲವ್’ ಸಿನಿಮಾ ಸಹ ಇದೇ ವಾರ ತೆರೆಗೆ ಬರುತ್ತಿದೆ. ಸ್ನೇಹ, ಪ್ರೀತಿಗೆ ಪ್ರಾಣ ಕೊಡುವ ರಗಡ್ ಹುಡುಗನ ಕತೆಯನ್ನು ಈ ಸಿನಿಮಾ ಹೊಂದಿರುವುದು ಟ್ರೈಲರ್‌ನಿಂದ ಗೊತ್ತಾಗುತ್ತಿದೆ. ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲಕೇರಿ ನಾಯಕ-ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಎಸ್.ನಾರಾಯಣ್, ಪವಿತ್ರ ಲೋಕೇಶ್ ಇನ್ನೂ ಹಲವರು ಇದ್ದಾರೆ.