PSI ನೇಮಕಾತಿಯಲ್ಲಿ ಅಕ್ರಮ: ಅಮೃತ್ ಪೌಲ್ಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣದ ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನಗರದ 1ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಜು.4ರಂದು ಅಮೃತ್ ಪೌಲ್ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರನ್ನು ಪಿಎಸ್ಐ ಹುದ್ದೆ ನೇಮಕಾತಿ ಹಗರಣ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದು, ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು.
ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನ ಆರಂಭದಲ್ಲೇ ದಟ್ಟವಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದ ವೇಳೆ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರೇ ಡೀಲ್ ಕುದುರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ಮೊದಲ ತಲೆದಂಡ ಎಂಬಂತೆ ಏ.27ರಂದೇ ಅಮೃತ್ ಪೌಲ್ ಅವರನ್ನ ಬೆಂಗಳೂರಿನ ಆಂತರಿಕ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು. ಬಳಿಕ ಇದೇ ಪ್ರಕರಣ ಸಂಬಂಧ ಅಮೃತ್ ಪೌಲ್ ಈ ಹಿಂದೆ ಮೂರು ಬಾರಿ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದರು. ಜು.4ರಂದು ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾದಾಗ ಇವರನ್ನ ಬಂಧಿಸುವ ಮೂಲಕ ಸಿಐಡಿ ಸಂಚಲನ ಮೂಡಿಸಿತ್ತು.
ಹೆಚ್ಚಿನ ವಿಚಾರಣೆ ಸಲುವಾಗಿ ಮೊದಲು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಅಧಿಕಾರಿಗಳು ಪಡೆದಿದ್ದರು. ಈ ಅವಧಿಗೆ ಜು.12ಕ್ಕೆ ಮುಗಿದಿತ್ತು. ಜು.13ರಂದು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಅಮೃತ್ಪೌಲ್ ಜತೆ ಇನ್ನುಳಿದ ನಾಲ್ವರು ಆರೋಪಿಗಳಾದ ಡಿವೈಎಸ್ಪಿ ಶಾಂಕಕುಮಾರ್, ಎಫ್ಡಿಎ ಹರ್ಷ, ಆರ್ಎಸ್ಐ ಶ್ರೀಧರ್ ಹಾಗೂ ಶ್ರೀನಿವಾಸ್ ಎಂಬುವರನ್ನ ಸಿಐಡಿ ಅಧಿಕಾರಿಗಳು ಹಾಜರುಪಡಿಸಿದ್ದರು. ಅಮೃತ್ ಪೌಲ್ಗೆ 1.36 ಕೋಟಿ ರೂಪಾಯಿ ನೀಡಿರುವುದಾಗಿ ಶಾಂತಕುಮಾರ್ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಇನ್ನಷ್ಟು ವಿಚಾರಣೆ ನಡೆಸಬೇಕು. 6 ದಿನಗಳ ಕಾಲ ಅಮೃತ್ ಪೌಲ್ ಅವರನ್ನ ನಮ್ಮ ಕಸ್ಟಡಿಗೆ ನೀಡಬೇಕು ಎಂಬ ಸಿಐಡಿ ಅಧಿಕಾರಿಗಳ ಮನವಿಯನ್ನ ಪುರಸ್ಕರಿಸಿದ್ದ ಕೋರ್ಟ್, 3 ದಿನ ಕಸ್ಟಡಿಗೆ ನೀಡಿತ್ತು. ಅಲ್ಲದೆ ಉಳಿದ ನಾಲ್ವರನ್ನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಇಂದು(ಜು.15) ವಿಚಾರಣೆ ನಡೆಸಿದ ನ್ಯಾಯಾಲಯ, ಅಮೃತ್ ಪೌಲ್ ಅವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಪಂಜಾಬ್ ಮೂಲದ ಅಮೃತ್ ಪೌಲ್, 1995ರ ಬ್ಯಾಚ್ನ ಐಪಿಎಸ್ ಅಧಿಕಾರಿ. 2000-2003ರ ವರೆಗೆ ಉಡುಪಿ ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಕರ್ನಾಟಕ ವೆಸ್ಟರ್ನ್ ರೇಂಜ್ ಐಜಿಯಾಗಿ ಕೆಲಸ ಮಾಡಿದ ಅಮೃತ್ ಪೌಲ್, 2018ರಲ್ಲಿ ಸೆಂಟ್ರಲ್ ರೇಂಜ್ ಐಜಿಯಾಗಿ ನೇಮಕವಾದರು. 2019ರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಹೊಂದಿದ್ದರು. ಕರ್ನಾಟಕದ ನೇಕಾತಿಯ ಸಂಪೂರ್ಣ ಜವಾಬ್ದಾರಿ ಇವರದ್ದೇ ಆಗಿತ್ತು. ಒಎಂಆರ್ ಶೀಟ್ ಕೊಠಡಿ ಕೀ ಇವರ ಉಸ್ತುವಾರಿಯಲ್ಲೇ ಇತ್ತು.