ಬೃಹತ್ ಅಲೆ ಅಪ್ಪಳಿಸಿ ಭಾರತ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ

ಒಮನ್, ಜು.15- ರಜಾ ದಿನದ ಪ್ರವಾಸಕ್ಕಾಗಿ ಒಮನ್‍ಗೆ ತೆರಳಿ ಸಮುದ್ರದ ಬಂಡೆಗಲ್ಲುಗಳ ದಡದಲ್ಲಿ ಆಡುವಾಗ ಬೃಹತ್ ಅಲೆ ಅಪ್ಪಳಿಸಿ ಭಾರತ ಮೂಲದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಈ ಕುಟುಂಬವು ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿದ್ದು, ಒಮನ್‍ಗೆ ಪ್ರವಾಸಕ್ಕೆ ತೆರಳಿದ್ದಾಗ ಈ ಭೀಕರ ದುರ್ಘಟನೆ ನಡೆದಿದೆ.
ಶಶಿಕಾಂತ್ ಮ್ಹಾಮನೆ (42) ಅವರು ತಮ್ಮ ಪತ್ನಿ ಮತ್ತು ಮಕ್ಕಳಾದ ಶೃತಿ (9), ಶ್ರೇಯಸ್ (6) ಜತೆ ಸಲಾಹ್ ಅಲ- ಮುಘಸೈಲ್ ಕರಾವಳಿಯಲ್ಲಿ ಪ್ರವಾಸ ಕೈಗೊಂಡಿದ್ದರು.
ಇದ್ದಕ್ಕಿದ್ದಂತೆ ಅಪ್ಪಳಿಸಿದ ಬೃಹತ್ ಅಲೆಗಳು ಎಂಟು ಮಂದಿಯನ್ನು ಕೊಚ್ಚಿಕೊಂಡು ಹೋಗಿದೆ. ತಂದೆ-ಮಗನ ಮೃತದೇಹ ಪತ್ತೆಯಾಗಿದ್ದು, ಮಗಳ ಮೃತದೇಹ ಇದುವರೆಗೂ ಸಿಕ್ಕಿಲ್ಲ. ಇತರೆ ಮೂವರನ್ನು ತಕ್ಷಣವೇ ರಕ್ಷಿಸಲಾಗಿದೆ.
ಸಮುದ್ರ ತೀರದಲ್ಲಿ ತುರ್ತು ಸೇವಾ ತಂಡವಿದ್ದ ಕಾರಣ ಸಂಭವಿಸಬಹುದಾಗಿದ್ದ ಇನ್ನಷ್ಟು ಭಾರೀ ಅನಾಹುತ ತಪ್ಪಿದೆ. ಬೀಚ್‍ನಲ್ಲಿ ಆಡುತ್ತಿದ್ದ ಶಶಿಕಾಂತ್ ಮತ್ತು ಅವರ ಮಗ ಶ್ರೇಯಸ್ ಇಬ್ಬರೂ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಅವರ ಮಗಳು ಶೃತಿ ನಾಪತ್ತೆಯಾಗಿದ್ದಾಳೆ. ಮಕ್ಕಳನ್ನು ರಕ್ಷಿಸಲು ಶಶಿಕಾಂತ್ ಅವರು ಮುಂದಾದಾಗ ಅವರು ನೀರಿನಲ್ಲಿ ಮುಳುಗಿದ್ದಾರೆ.
ಈ ದುರಂತ ಘಟನೆಯು ಮತ್ತೊಬ್ಬ ಪ್ರವಾಸಿಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಭಯಾನಕ ಘಟನೆ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲಾಯ ಜಾಥ್ ನಿವಾಸಿಯಾಗಿದ್ದ ಶಶಿಕಾಂತ್ ಅವರು ದುಬೈ ಮೂಲದ ಸಂಸ್ಥೆಯಲ್ಲಿ ಸೇಲ್ಸï ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.