ರಕ್ಕಸಕೊಪ್ಪ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಭರ್ತಿಗೆ ನಾಲ್ಕೇ ಅಡಿ ಬಾಕಿ

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಭರ್ತಿಗೆ ಕೇವಲ ನಾಲ್ಕೇ ಅಡಿ ಬಾಕಿ ಇದೆ.
2,475 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಶುಕ್ರವಾರದ ಬೆಳಿಗ್ಗೆವರೆಗೆ 2,471 ಅಡಿ ನೀರು ಸಂಗ್ರಹವಾಗಿದೆ.
‘ಪ್ರತಿವರ್ಷ ಜುಲೈ ಅಂತ್ಯಕ್ಕೆ ಭರ್ತಿಯಾಗುತ್ತಿತ್ತು. ಆದರೆ, ಖಾನಾಪುರ, ಬೆಳಗಾವಿ ತಾಲ್ಲೂಕು ಹಾಗೂ ಮಹಾರಾಷ್ಟ್ರದಲ್ಲಿ ಬಿಟ್ಟುಬಿಡದೆ ಮಳೆಯಾಗುತ್ತಿರುವುದರಿಂದ ಈ ಬಾರಿ ತುಸು ಮೊದಲೇ ಭರ್ತಿಯಾಗುತ್ತಿದೆ. ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಹೆಚ್ಚುವರಿ ನೀರು ಹೊರಬಿಡಲಾಗುವುದು. ನದಿದಡದ ರೈತರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ ಮರನಾಳ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಮೈದುಂಬಿ ಹರಿಯುತ್ತಿರುವ ಮಲಪ್ರಭೆ: ಖಾನಾಪುರ, ಬೈಲಹೊಂಗಲ, ಚನ್ನಮ್ಮ ಕಿತ್ತೂರು, ಸವದತ್ತಿ ತಾಲ್ಲೂಕಿನಲ್ಲೂ ವರುಣನ ಅಬ್ಬರ ಮುಂದುವರಿದಿದ್ದು, ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಸವದತ್ತಿ ತಾಲ್ಲೂಕಿನ ನವಿಲುತೀರ್ಥದಲ್ಲಿರುವ ರೇಣುಕಾ ಸಾಗರ ಜಲಾಶಯಕ್ಕೆ ಶುಕ್ರವಾರ 14,939 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ನೀರಿನ ಮಟ್ಟ 2062.50 ಅಡಿಗೆ ಏರಿಕೆಯಾಗಿದೆ. ಭರ್ತಿಗೆ ಇನ್ನೂ 17 ಅಡಿ ಬಾಕಿ ಇದೆ.
ಘಟಪ್ರಭಾ ನದಿಯಲ್ಲೂ ನೀರಿನ ಹರಿವು ಹೆಚ್ಚಿದೆ. 2,175 ಅಡಿ ನೀರು ಸಂಗ್ರಹ ಸಾಮರ್ಥ್ಯದ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಶುಕ್ರವಾರ 2,132.20 ಅಡಿ ನೀರು ಸಂಗ್ರಹವಾಗಿದೆ. 25,726 ಕ್ಯೂಸೆಕ್ ಒಳಹರಿವು ಇದ್ದರೆ, ಹೊರಹರಿವಿನ ಪ್ರಮಾಣ 119 ಕ್ಯುಸೆಕ್ ಇದೆ.