ಬೆಳಗಾವಿಯಲ್ಲಿ ವಿಧಾನ ಪರಿಷತ್ ಚುನಾವಣೆ ಸೋಲಿಗೆ ಕಾರಣರಾದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ ಇಬ್ಬರೂ ನಾಯಕರು

ಬೆಂಗಳೂರು: ಶುಕ್ರವಾರ ನಡೆದ ಬಿಜೆಪಿ ಚಿಂತನಾ ಸಭೆಯಲ್ಲಿ ಬೆಳಗಾವಿ ರಾಜಕೀಯ ಕುರಿತು ಚರ್ಚೆ ನಡೆದಿದೆ. ಚಿಂತನಾ ಸಭೆಯಲ್ಲಿ ಬೆಳಗಾವಿಯಲ್ಲಿ ವಿಧಾನ ಪರಿಷತ್ ಚುನಾವಣೆ ಸೋಲಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಆಗ್ರಹಿಸಿದ್ದಾರೆ ಎನ್ನಲಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅವರ ಮಾತಿಗೆ ಸಭೆಯಲ್ಲಿಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ ಎನ್ನಲಾಗಿದ್ದು, ಬೆಳಗಾವಿಯಲ್ಲಿ ಸಚಿವರು, ಸಂಸದರಿದ್ದರೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರದೇ ಇರುವವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಸೋದರನನ್ನೇ ಸೋಲಿಸಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡಿದ್ದೇವೆ. ನನ್ನ ಪಕ್ಷ ನಿಷ್ಠೆಯ ಬಗ್ಗೆ ಆರೋಪಿಸುವುದು ಸರಿಯಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆಂದು ತಿಳಿದು ಬಂದಿದೆ.
ಇಬ್ಬರೂ ನಾಯಕರ ಆರೋಪ ಪ್ರತ್ಯಾರೋಪ ಕೇಳಿದ ಬಿಜೆಪಿ ನಾಯಕರು, ಬೆಳಗಾವಿ ಚುನಾವಣೆ ಸೋಲಿನ ಚರ್ಚೆಯನ್ನು ಸ್ಥಗಿತಗೊಳಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.