ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬರದೇ, ಎಲ್ಲೋ ಕುಳಿತು ಮಾತನಾಡುತ್ತಿದ್ದಾರೆ’ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ

ಬೆಳಗಾವಿ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಅವಾಂತರಗಳು ಉಂಟಾಗುತ್ತಿವೆ. ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬರದೇ, ಎಲ್ಲೋ ಕುಳಿತು ಮಾತನಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಕಿಡಿ ಕಾರಿದರು.
‘ಗಡಿ ಜಿಲ್ಲೆಯಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದೆ. ಈಗಾಗಲೇ ಶಾಲೆ, ಮನೆಗಳ ಕಟ್ಟಡಗಳೂ ಕುಸಿದಿವೆ. ಜೀವ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಗೋವಿಂದ ಕಾರಜೋಳ ಅವರು ತಕ್ಷಣ ಭೇಟಿ ನೀಡಿಬೇಕು. ಸ್ಥಳೀಯವಾಗಿ ಇದ್ದು ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ಅವರು ನಗರದಲ್ಲಿ ಶುಕ್ರವಾರ ಮಧ್ಯಮಗಳ ಮುಂದೆ ಹೇಳಿದರು.
‘ಕೂಡಲೇ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಬೇಕು. ಸಂಭವನೀಯ ಪ್ರವಾಹ ನಿರ್ವಹಣೆಗೆ ಅಧಿಕಾರಿಗಳು ಆಸಕ್ತಿ ವಹಿಸಬೇಕು. ಕಳೆದ ಮೂರು ವರ್ಷಗಳಿಂದಲೂ ಜಿಲ್ಲೆಯ ಜನ ಪ್ರವಾಹ, ಅತಿವೃಷ್ಟಿಯ ಕಾರಣ ತತ್ತರಿಸಿದ್ದಾರೆ. ಆದರೂ ಅಧಿಕಾರಿಗಳು ಪೂರ್ವನಿಯೋಜಿತ ತಯಾರಿ ಮಾಡಿಕೊಂಡಿಲ್ಲ. ಎಲ್ಲ ಅಧಿಕಾರಿಗಳೂ ಗ್ರಾಮ ಮಟ್ಟದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇದರ ಜವಾಬ್ದಾರಿ ಹೊರುವ ಸಲುವಾಗಿಯಾದರೂ ಸಚಿವರು ಜಿಲ್ಲೆಗೆ ಬರಬೇಕು’ ಎಂದೂ ಆಗ್ರಹಿಸಿದರು.