ಪುಷ್ಪ ಚಿತ್ರದ ವಾಕಿಂಗ್ ಸ್ಟೈಲ್ ಹಿಂದಿನ ರಹಸ್ಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟ ಅಲ್ಲು ಅರ್ಜುನ್!

ಹೈದರಾಬಾದ್: ಕಳೆದ ಡಿಸೆಂಬರ್ 17ರಂದು ಪ್ಯಾನ್ ಇಂಡಿಯಾ ಬಿಡುಗಡೆಯಾದ ಪುಷ್ಪ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು. ವಿಭಿನ್ನ ಕತೆ ಹಾಗೂ ಹಾಡುಗಳಿಂದಲೇ ಈ ಸಿನಿಮಾ ದೇಶದೆಲ್ಲೆಡೆ ಸದ್ದು ಮಾಡಿತು. ಅದರಲ್ಲೂ ನಟ ಅಲ್ಲು ಅರ್ಜುನ್ ಅವರ ವಿಶೇಷ ನಟನೆ ಈ ಸಿನಿಮಾದಲ್ಲಿ ಹೆಚ್ಚಿನ ಗಮನ ಸೆಳೆಯಿತು.
ತೆಗ್ಗೋದೇ ಇಲ್ಲ ಮತ್ತು ಪುಷ್ಪ ಅಂದ್ರೆ ಫ್ಲವರ್ ಅಂದುಕೊಂಡ ಫೈಯರ್ರು ಎಂಬಾ ಡೈಲಾಗ್ಗಳು ಎಲ್ಲರ ಬಾಯಲ್ಲೂ ಕೇಳಿಬರುತ್ತಿದ್ದವು. ಸಿನಿಮಾದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು, ಅಲ್ಲು ಅರ್ಜುನ್ ವಾಕಿಂಗ್ ಸ್ಟೈಲ್ ಮತ್ತು ಮ್ಯಾನರಿಸಂ. ಅನೇಕ ಸೆಲೆಬ್ರಿಟಿಗಳು ಕೂಡ ಅದನ್ನು ನಕಲು ಮಾಡಿದರು. ಈ ಕಾರಣದಿಂದಲೇ ಪುಷ್ಪ ಸಿನಿಮಾ ವಿಶ್ವ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿತು.
ಇತ್ತೀಚೆಗೆ ನಡೆದ ಸಂದರ್ಶನದೊಂದರಲ್ಲಿ ಸಿಗ್ನೇಚರ್ ವಾಕಿಂಗ್ ಸ್ಟೈಲ್ ಹಿಂದಿನ ರಹಸ್ಯವನ್ನು ಅಲ್ಲು ಅರ್ಜುನ್ ಅವರು ಬಹಿರಂಗಪಡಿಸಿದ್ದಾರೆ. ಇಂಡಿಯಾ ಟುಡೆ ಜತೆ ಮಾತನಾಡಿರುವ ಬನ್ನಿ, ಸಿನಿಮಾದ ಎಲ್ಲ ಕ್ರೆಡಿಟ್ ಅನ್ನು ನಿರ್ದೇಶಕ ಸುಕುಮಾರ್ ಅವರಿಗೆ ನೀಡಿದ್ದಾರೆ.
ನೀವು ಏನು ಮಾಡುತ್ತೀರಿ ನನಗೆ ಗೊತ್ತಿಲ್ಲ, ಆದರೆ, ಎಲ್ಲರು ನಿನ್ನಂತೆಯೇ ನಡೆಯಬೇಕು ಎಂದು ಸುಕುಮಾರ್ ಹೇಳಿದರು. ಇದಾದ ಬಳಿಕ ನಾನು ಒಂದು ಭುಜವನ್ನು ಮೇಲೆತ್ತಿ ನಡೆಯುವ ವಿಭಿನ್ನ ವಾಕಿಂಗ್ ಸ್ಟೈಲ್ ಐಡಿಯಾದೊಂದಿಗೆ ವಾಪಸ್ ಬಂದೆ. ಆ ಸ್ಟೈಲ್ ಅನ್ನು ಎಲ್ಲರೂ ಸುಲಭವಾಗಿ ನಕಲು ಮಾಡಬಹುದು ಎಂದು ಭಾವಿಸಿದೆ. ಕೊನೆಗೆ ಅದು ಯಶಸ್ವಿಯೂ ಆಯಿತು ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಇನ್ನು ಈ ಬ್ಲಾಕ್‌ಬಸ್ಟರ್ ಚಿತ್ರವು ವಿಶ್ವಾದ್ಯಂತ ಸುಮಾರು 365 ಕೋಟಿ ರೂ. ಗಳಿಸಿತು. ಹಿಂದಿ ಆವೃತ್ತಿಯೂ ಸಹ ಬಾಕ್ಸ್ ಆಫೀಸ್‌ನಲ್ಲಿ ಸರಿಸುಮಾರು 110 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು. ಇದೇ ಸಂದರ್ಭದಲ್ಲಿ ಚಿತ್ರದ ಪ್ಯಾನ್ ಇಂಡಿಯಾ ಯಶಸ್ಸಿನ ಬಗ್ಗೆ ಮಾತನಾಡಿದ ಅಲ್ಲು ಸರ್ಜುನ್, ಪ್ಯಾನ್ ಇಂಡಿಯಾ ಐಡಿಯಾ ಇಡೀ ದೇಶವನ್ನು ಮೆಚ್ಚಿಸಲು ಅಲ್ಲ, ಆದರೆ ಇದು ಉತ್ತಮ ವಸ್ತು (ಸಿನಿಮಾ)ವಾಗಿತ್ತು. ಸ್ಥಳೀಯ ಪ್ರೇಕ್ಷಕರು ಸಹ ಈ ಸಿನಿಮಾದಿಂದ ಪ್ರಭಾವಿತರಾದರು. ಎಲ್ಲಡೆ ಮೆಚ್ಚುಗೆ ಗಳಿಸಿತು ಎಂದಿದ್ದಾರೆ.
ಇದೀಗ ಇಡೀ ಚಿತ್ರತಂಡ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯ ಮುಂದಿನ ಭಾಗದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ವರ್ಷದ ಅಂತ್ಯದಲ್ಲೇ ಈ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.