75ನೇ ಸ್ವಾತಂತ್ರ್ಯೋತ್ಸವದ ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮ ಅಂಗವಾಗಿ ಹರ್ ಘರ್ ತಿರಂಗಾ: ಸಿಎಂ ಜತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂವಾದ

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ‘ಆಜಾದಿ ಕಾ ಅಮೃತ ಮಹೋತ್ಸವ’ ಕಾರ್ಯಕ್ರಮ ಅಂಗವಾಗಿ ಹರ್ ಘರ್ ತಿರಂಗಾ ಅಂಗವಾಗಿ ರಾಜ್ಯದಲ್ಲಿ 1 ಕೋಟಿ ರಾಷ್ಟ್ರಧ್ವಜ ಹಾರಿಸಲು ಕ್ರಮವಹಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಹಾಗೂ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಅವರೊಂದಿಗೆ ‘ಹರ್ ಘರ್ ತಿರಂಗಾ’ ಕುರಿತು ಎಲ್ಲ ರಾಜ್ಯಗಳ ಸಿಎಂಗಳ ಜತೆ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಸರ್ಕಾರಿ, ಸರ್ಕಾರೇತರ, ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರೂಪಿಸಲಾಗಿದ್ದು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ, ಪೊಲೀಸ್ ಸೇರಿ ಈಗಾಗಲೆ ಕಾರ್ಯಕ್ರಮ ಅನುಷ್ಠಾನಕ್ಕೆ ಸಭೆಗಳು ನಡೆಯುತ್ತಿವೆ ಎಂದರು. ಶೇ.60 ಗ್ರಾಮೀಣ ಪ್ರದೇಶ ಹಾಗೂ ಶೇ.40 ಬಿಬಿಎಂಪಿ ವ್ಯಾಪ್ತಿ ಸೇರಿ ನಗರ ಪ್ರದೇಶಗಳ ಮನೆಗಳು, ಸರ್ಕಾರಿ ಕಚೇರಿಗಳಲ್ಲಿ ಧ್ವಜ ಹಾರಿಸುವ ಮೂಲಕ ಒಂದು ಕೋಟಿ ತ್ರಿವರ್ಣ ಧ್ವಜಗಳನ್ನು ಹಾರಿಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಈಗಾಗಲೆ ಸುತ್ತೋಲೆ ನೀಡಲಾಗಿದ್ದು, ಶಾಲಾ-ಕಾಲೇಜು, ಅಂಗನವಾಡಿಗಳಲ್ಲೂ ರಾಷ್ಟ್ರಧ್ವಜ ಹಾರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರಾಜ್ಯದ ಎನ್ಸಿಸಿ, ಎನ್ಎಸ್ಎಸ್, ಮಾಜಿ ಸೈನಿಕರನ್ನು ಒಳಗೊಂಡಂತೆ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಧಾರವಾಡದ ಬಳಿ ಇರುವ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ, ಸ್ವಸಹಾಯ ಸಂಘಗಳ ಮೂಲಕ 50 ಲಕ್ಷದಷ್ಟು ಧ್ವಜಗಳನ್ನು ತಯಾರಿಸುತ್ತಿದ್ದೇವೆ. 5 ಲಕ್ಷ ತ್ರಿವರ್ಣ ಧ್ವಜಗಳನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೆ ಇಂಡೆಂಟ್ ನೀಡಲಾಗಿದ್ದು, ಉಳಿದ 45 ಲಕ್ಷ ತ್ರಿವರ್ಣ ಧ್ವಜ ಪೂರೈಸಲು ಮತ್ತೆ ಇಂಡೆಂಟ್ ನೀಡಲಾಗುವುದು ಎಂದರು. ಎಲ್ಲ ರಾಜ್ಯದ ಮುಖ್ಯಮಂತ್ರಿಗಳು, ಸಚಿವ ಸುನಿಲ್ ಕುಮಾರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ವ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್.ಹರ್ಷ ಇತರ ಅಧಿಕಾರಿಗಳು ಇದ್ದರು.
ಮೋದಿ, ಷಾ ಪಾತ್ರ ಮೆಚ್ಚುವಂಥದ್ದು: ರಾಷ್ಟ್ರೀಯತೆ ಮತ್ತು ದೇಶಭಕ್ತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಪಾತ್ರ ಮೆಚ್ಚುವಂತದ್ದು ಎಂದರು.
ಅಂಚೆ ಕಚೇರಿಯಲ್ಲಿ ಲಭ್ಯವಿರಲಿದೆ ಧ್ವಜ: ಜಾಲತಾಣಗಳಲ್ಲಿ ಹಾಗೂ ಸರ್ಕಾರದ ಎಲ್ಲ ಜಾಹೀರಾತುಗಳಲ್ಲಿ ಕಾರ್ಯಕ್ರಮ ಕುರಿತು ಪ್ರಕಟಿಸಬೇಕು. ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳು ಲಭ್ಯವಿರಲಿದ್ದು, ಇಂಡೆಂಟ್ ನೀಡುವ ಮೂಲಕ ಜನರು ವೈಯಕ್ತಿಕವಾಗಿ ಹಾಗೂ ಸರ್ಕಾರದವರು ಖರೀದಿಸಬಹುದಾಗಿದೆ.
ಹರ್ ಘರ್ ತಿರಂಗಾ ಕಾರ್ಯಕ್ರಮ ಕುರಿತು ಎಲ್ಲ ಹಂತದಲ್ಲೂ ಅಗತ್ಯ ಮತ್ತು ವ್ಯಾಪಕ ಪ್ರಚಾರ ನೀಡಿ. ಆಗಸ್ಟ್ 13 ರಿಂದ 15 ರವರೆಗೆ ಮೂರು ದಿನ ದೇಶಾದ್ಯಂತ 20 ಕೋಟಿ ರಾಷ್ಟ್ರ ಧ್ವಜಗಳನ್ನು ಹಾರಿಸಲು ಕ್ರಮವಹಿಸಬೇಕು. 100 ಕೋಟಿ ಜನತೆಯನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಉತ್ತೇಜಿಸಬೇಕು.
| ಅಮಿತ್ ಷಾ ಕೇಂದ್ರ ಸಚಿವ
ರಾಷ್ಟ್ರಪತಿ ಚುನಾವಣೆಗೆ ವಿಧಾನಸೌಧದ ಸಜ್ಜು
ಬೆಂಗಳೂರು: ರಾಷ್ಟ್ರಪತಿ ಚುನಾವಣೆಗಾಗಿ ಸೋಮವಾರ ಮತದಾನ ನಡೆಯಲಿದ್ದು, ವಿಧಾನಸೌಧದ ಮೊದಲ ಮಹಡಿ ಕೊಠಡಿ ಸಂಖ್ಯೆ 106ರಲ್ಲಿ ಸಕಲ ಸಿದ್ಧತೆಗಳಾಗಿವೆ. ಮತದಾನ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಿಗದಿ ಆಗಿದೆ. ವಿಧಾನಸಭೆಯ 224 ಸದಸ್ಯರು ಅರ್ಹ ಮತದಾರರಾಗಿದ್ದಾರೆ.
ಅನಾರೋಗ್ಯದ ಕಾರಣಕ್ಕೆ ಚಾಮರಾಜನಗರ ಲೋಕಸಭೆ ಕ್ಷೇತ್ರದ ಸದಸ್ಯ ಶ್ರೀನಿವಾಸ ಪ್ರಸಾದ್ ಕೋರಿಕೆಯಂತೆ ಬೆಂಗಳೂರಿನಲ್ಲೇ ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಮತದಾನಕ್ಕೆ ನಿಗದಿತ ಕೊಠಡಿಗೆ ಹೊಂದಿಕೊಂಡ ಕೊಠಡಿಯನ್ನು ಸ್ಟ್ರಾಂಗ್ ರೂಮ್ ಆಗಿ ಬಳಕೆ ಮಾಡಿಕೊಂಡಿದ್ದು, ಪಕ್ಕದ ಮತ್ತೊಂದು ಕೊಠಡಿಯನ್ನು ಶಾಸಕರಿಗೆ ಕುಳಿತುಕೊಳ್ಳಲು ಮೀಸಲಿಡಲಾಗಿದೆ. ಮತದಾನಕ್ಕೆ ನಿಗದಿಯಾದ ಕೊಠಡಿಯಲ್ಲಿ ಸದಸ್ಯರು ಮತಪತ್ರ ಪಡೆಯುವ ಮುನ್ನ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ.
ಮತಪತ್ರದಲ್ಲಿ ಮತ ಗುರುತಿಗೆ ನೇರಳೆ ಬಣ್ಣದ ಪೆನ್ನು ಮಾತ್ರ ಬಳಸಬೇಕು. ಬೇರೆ ಪೆನ್ನು ಬಳಸಿದ ಮತ ಅಸಿಂಧುವಾಗಲಿದೆ ಎಂದು ಆಯೋಗ ಮಾಹಿತಿ ನೀಡಿದೆ. ಚುನಾವಣಾ ಆಯೋಗದ ವೀಕ್ಷಕ ಅಮಿತ್ಕುಮಾರ್ ಘೋಷ್, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ಭಾನುವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಸಹಾಯಕ ಚುನಾವಣಾಧಿ ಕಾರಿಯೂ ಆದ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಸುಗಮ ಮತದಾನ ಪ್ರಕ್ರಿಯೆಗೆ ಸನ್ನದ್ಧವಾಗಿರುವ ವಿವರ ನೀಡಿದರು. ವಿಧಾನಸಭೆಯ 224 ಸದಸ್ಯರಲ್ಲಿ ಸ್ಪೀಕರ್, ತಲಾ ಒಬ್ಬ ಬಿಎಸ್ಪಿ, ಪಕ್ಷೇತರ ಸದಸ್ಯ ಪಕ್ಷದ ಸಹ ಸದಸ್ಯರಾಗಿರುವುದು ಸೇರಿ ಬಿಜೆಪಿ 122 ಸದಸ್ಯ ಬಲ ಹೊಂದಿದೆ. ಮುಮು ಅವರ ಕೋರಿಕೆಯಂತೆ ಜೆಡಿಎಸ್ ಬೆಂಬಲ ಘೋಷಿಸಿದ್ದು, ವಿಧಾನಸಭೆಯಲ್ಲಿ ಆ ಪಕ್ಷವು 32 ಸದಸ್ಯರ ಬಲ ಹೊಂದಿದೆ. ಕಾಂಗ್ರೆಸ್ 69 ಜತೆಗೆ ಒಬ್ಬ ಪಕ್ಷೇತರ ಸಹ ಸದಸ್ಯರಾಗಿ ಗುರುತಿಸಿಕೊಂಡಿದ್ದು, 70 ಸದಸ್ಯರ ಬಲ ಹೊಂದಿದೆ.
ಜಗದೀಪ್ ಧನ್ಕರ್ ಗೆಲುವು ಸ್ಪಷ್ಟ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಜಗದೀಪ್ ಧನ್ಕರ್ ಗೆಲುವು ಸ್ಪಷ್ಟವಾಗಿದೆ. ಧನ್ಕರ್ಗೆ ದೊರೆಯುವ ಮತದಲ್ಲಿ ಅರ್ಧದಷ್ಟು ಮತಗಳು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಆಳ್ವಗೆ ಸಿಗುವುದು ಅನುಮಾನ. ಮತದಾನದ ಹಕ್ಕು ಹೊಂದಿರುವ 790 ಸಂಸದರ (ಲೋಕಸಭೆ 545 ಮತ್ತು ರಾಜ್ಯಸಭೆ 245) ಪೈಕಿ, ಶಿವಸೇನೆಯೂ ಸೇರಿ ಎನ್ಡಿಎ ಕಡೆಯಿಂದ 478 ಮತಗಳು ಧನ್ಕರ್ಗೆ ಪ್ರಾಪ್ತವಾಗಲಿವೆ. ವೈಎಸ್ಆರ್ ಕಾಂಗ್ರೆಸ್, ಬಿಜೆಡಿ, ಬಿಎಸ್ಪಿ ಇನ್ನಿತರ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ದೊರೆತರೆ ಧನ್ಕರ್ 547 ಮತಗಳನ್ನು ಗಳಿಸಲಿದ್ದಾರೆ. ಪ್ರತಿಪಕ್ಷಗಳ ಅಭ್ಯರ್ಥಿಗೆ 232 ಸಂಸದರ ಬೆಂಬಲ ದೊರೆಯುವ ಲೆಕ್ಕಾಚಾರವಿದೆ. ಹೀಗಾಗಿಯೇ ಆ.6ರ ಫಲಿತಾಂಶ ನಿರ್ಧಾರವಾಗಿದೆ ಎಂಬ ವಿಶ್ವಾಸವನ್ನು ಧನ್ಕರ್ ವ್ಯಕ್ತಪಡಿಸಿದ್ದಾರೆ.
| ಅಮಿತ್ ಷಾ ಕೇಂದ್ರ ಸಚಿವ