ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮತ ಪಡೆದು ಆಯ್ಕೆಯಾಗುವುದು ಖಚಿತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಬೆಂಗಳೂರು,ಜು.18- ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಮೂರನೇ ಎರಡರಷ್ಟು ಬಹುಮತ ಪಡೆದು ಆಯ್ಕೆಯಾಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‍ಡಿಎ ಮೈತ್ರಿಕೂಟದ ಜೊತೆಗೆ ದ್ರೌಪದಿ ಮುರ್ಮು ಅವರಿಗೆ ಅನೇಕ ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸಿವೆ. ಹೀಗಾಗಿ ಅವರ ಗೆಲುವು ನೂರಕ್ಕೆ ನೂರು ಖಚಿತ ಎಂದು ಹೇಳಿದರು.
ಅವರೊಬ್ಬ ಸಮರ್ಥ ಮತ್ತು ದಕ್ಷ ಆಡಳಿತಗಾರರು. ಅಲ್ಲದೆ ಆದಿವಾಸಿ ಸಮುದಾಯಕ್ಕೆ ಸೇರಿದ ಮಹಿಳೆ. ಹೀಗಾಗಿ ಅನೇಕ ಪ್ರಾದೇಶಿಕ ಪಕ್ಷಗಳು ಸ್ವಯಂಪ್ರೇರಿತರಾಗಿ ಬೆಂಬಲ ಘೋಷಿಸಿವೆ. ಅವರ ಗೆಲುವಿನಲ್ಲಿ ಯಾವುದೇ ಸಂಶಯ ಬೇಡ ಎಂದರು.
ಮತಗಳ ಎಣಿಕೆ ಕೇವಲ ಔಪಚಾರಿಕವಾಗಿ ಉಳಿದಿದೆ. ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ ಎಂಬುದು ಎಲ್ಲರಿಗೂ ಇರುವ ಕುತೂಹಲ. ನಾನು ಮೊದಲೇ ಅವರಿಗೆ ಶುಭ ಕೋರುತ್ತೇನೆ. ರಾಷ್ಟ್ರಪತಿ ಆದ ನಂತರ ಅವರು ದೇಶವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ. ಇದರಲ್ಲಿ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಯಡಿಯೂರಪ್ಪ ಮನವಿ ಮಾಡಿದರು.