ಅಪ್ಪುಗೆ ಮತ್ತೆ “ಬ್ಲ್ಯೂ” ಟಿಕ್: ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಸದ್ಯ ಸಂತಸ ಸುದ್ದಿ ಇದಾಗಿದೆ. ಪುನೀತ್ ಅಗಲಿ 9 ತಿಂಗಳು ಕಳೆದರೂ ಅಭಿಮಾನಿಗಳು ಅವರನ್ನು ಸ್ಮರಿಸದ ದಿನವೇ ಇಲ್ಲ. ಒಂದಿಲ್ಲೊಂದು ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಅವರ ಕುರಿತ ವಿಚಾರಗಳು ಹರಿದಾಡುತ್ತಲೇ ಇವೆ.
ಇಂತಹ ಶ್ರೇಷ್ಠ ನಟನ ಬಗ್ಗೆ ಟ್ವಿಟ್ಟರ್ ತಾನು ಮಾಡಿದ ಯಡವಟ್ಟಿನಿಂದ ಕೊನೆಗೂ ಬುದ್ದಿ ಕಲಿತಿದೆ.
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪುನೀತ್ ಅವರ ಟ್ವಿಟ್ಟರ್ ಖಾತೆಗೆ ನೀಡಲಾಗಿದ್ದ ನೀಲಿ ಟಿಕ್ ತೆಗೆದುಹಾಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು, ಈಗ ತನ್ನಿಂದಾದ ತಪ್ಪನ್ನು ಸರಿಪಡಿಸಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಅವರ ಬಗ್ಗೆಗಿನ ಕುತೂಹಲಕಾರಿ ವಿಷಯಗಳನ್ನು ಹುಡುಕುವಲ್ಲಿ ಈಗಲೂ ಜನರು ಹಿಂದೆ ಬಿದ್ದಿಲ್ಲ. ಅವರ ಪ್ರತಿಯೊಂದು ವಿಡಿಯೋಗಳನ್ನು ವೀಕ್ಷಿಸುತ್ತಲೇ ಇರುತ್ತಾರೆ. ಈ ನಡುವೆ ಸ್ಟಾರ್ಗಳಿಗೆಂದೇ ನೀಡಲಾಗುವ ಬ್ಲ್ಯೂ ಟಿಕ್ ಅನ್ನು ತೆಗೆದಿದ್ದ ಟ್ವಿಟ್ಟರ್ ವಿರುದ್ಧ ಅಭಿಯಾನವನ್ನೇ ಆರಂಭಿಸಲಾಗಿತ್ತು.
ಇದರಿಂದ ಅಭಿಮಾನಿಗಳು ಭಾರೀ ಅಸಮಾಧಾನವನ್ನೇ ಹೊರಹಾಕಿದ್ದರು. ಇಷ್ಟು ದಿನ ಇದ್ದ ಪುನೀತ್ ರಾಜಕುಮಾರ್ ಅವರ ಟ್ವಿಟ್ಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಇದ್ದಕ್ಕಿದ್ದ ಹಾಗೆ ಮಾಯವಾಗಿತ್ತು. ಇದರಿಂದ ದೊಡ್ಡ ಮಟ್ಟದಲ್ಲಿ ನಡೆಸಿದ್ದ ಅಭಿಯಾನ ಪ್ರತಿಫಲ ನೀಡಿದೆ.
ಪುನೀತ್ ಅವರ ಖಾತೆಯಲ್ಲಿ ಹಲವು ತಿಂಗಳಿನಿಂದ ಯಾವುದೇ ಪೋಸ್ಟ್ ಹಾಕದ ಕಾರಣ ನೀಲಿ ಟಿಕ್ ತೆಗೆಯಲಾಗಿತ್ತು. ಆದರೆ ಅಭಿಮಾನಿಗಳು ನೀಲಿ ಟಿಕ್ ಮರಳಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಸದ್ಯ ಈಗ ಅಪ್ಪು ಖಾತೆಗೆ ನೀಲಿ ಟಿಕ್ ಮರಳಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.