ಮಾಜಿ ಕಾರ್ಪೋರೇಟರ್ ಪತಿ ಆಯೂಬ್ ಖಾನ್ ಕೊಲೆ, ಆರೋಪಿ ಅಂದರ್

ಬೆಂಗಳೂರು, ಜು. 18: ಮಸೀದಿಗೆ ಅಧ್ಯಕ್ಷನಾಗುವ ವಿಚಾರವಾಗಿ ಕೆ. ಆರ್. ಮಾರ್ಕೆಟ್ ವಾರ್ಡ್ ಬಿಬಿಎಂಪಿ ಸದಸ್ಯೆಯ ಪತಿ ಆಯೂಬ್ ಖಾನ್ ನನ್ನು ಕೊಲೆ ಮಾಡಿದ್ದ ಆರೋಪಿಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಮತೀನ್ ಬಂಧಿತ ಅರೋಪಿ. ಕಳೆದ ಜು. 13 ರಂದು ರಾತ್ರಿ ಚಾಮರಾಜಪೇಟೆಯ ಟಿಪ್ಪುನಗರದ ಬಳಿ ಮಸೀದಿಯಲ್ಲಿ ನಮಾಜ್ ಮಾಡಿಕೊಂಡು ಬರುತ್ತಿದ್ದ ವೇಳೆ ಆಯೂಬ್ ಖಾನ್ ನನ್ನು ಮತೀನ್ ಕೊಲೆ ಮಾಡಿದ್ದ.
ಆ ಬಳಿಕ ತಲೆ ಮರೆಸಿಕೊಂಡಿದ್ದ. ಈ ಕುರಿತು ಚಾಮರಾಜಪೇಟೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಕೆ.ಆರ್. ಮಾರ್ಕೆಟ್ ಬಿಬಿಎಂಪಿ ವಾರ್ಡ್ ಮಾಜಿ ಸದಸ್ಯೆ ನಾಜಿಮಾ ಖಾನಂ ಅವರ ಪತಿ ಆಯೂಬ್ ಖಾನ್ ಟಿಪ್ಪುನಗರದ ಖುದಾದತ್ ಮಸೀದಿಗೆ ಹದಿನೈದು ವರ್ಷಗಳಿಂದ ಅಧ್ಯಕ್ಷರಾಗಿದ್ದರು. ಕಳೆದ ಒಂದು ವರ್ಷದಿಂದ ಆಯೂಬ್ ಖಾನ್ ಬಾವ ಫ್ಯಾರುಖಾನ್ ಅವರ ಕೊನೆಯ ಮಗ ಮತೀನ್ ತನ್ನನ್ನು ಮಸೀದಿಗೆ ಅಧ್ಯಕ್ಷನನ್ನಾಗಿ ಮಾಡುವಂತೆ ಬೇಡಿಕೆ ಇಟ್ಟು ಪದೇ ಪದೇ ಜಗಳ ಮಾಡುತ್ತಿದ್ದ.
ಇದರ ನಡುವೆ ಆಯೂಬ್ ಖಾನ್ ತನ್ನ ಮಗ ಸಿದ್ಧಿಕ್ ಖಾನ್‌ನನ್ನು ಮಸೀದಿಗೆ ಅಧ್ಯಕ್ಷನನ್ನಾಗಿ ಮಾಡಲು ಮುಂದಾಗಿದ್ದರು. ಇದರಿಂದ ಕುಪಿತನಾಗಿದ್ದ ಮತೀನ್, ಆರು ತಿಂಗಳ ಹಿಂದೆಯೇ ಆಯೂಬ್ ಖಾನ್ ಮೇಲೆ ಜಗಳ ಮಾಡಲು ಯತ್ನಿಸಿದ್ದ. ಚಾಕು ತಂದು ಕೊಲೆ ಮಾಡುವುದಾಗಿ ಹೆದರಿಸಿದ್ದ. ಸಹೋದರನ ಪುತ್ರ ಎನ್ನುವ ಕಾರಣಕ್ಕೆ ಆಯೂಬ್ ಖಾನ್ ದೂರು ನೀಡಿರಲಿಲ್ಲ.
ಜು. 12 ರಂದು ಆಯೂಬ್ ಖಾನ್ ನನ್ನು ಭೇಟಿ ಮಾಡಿದ್ದ ಮತೀನ್, ನನ್ನನ್ನು ಮಸೀದಿಗೆ ಅಧ್ಯಕ್ಷನನ್ನಾಗಿ ಮಾಡು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಹೆದರಿಸಿದ್ದ. ಇದನ್ನು ನೋಡಿದ್ದ ಸ್ಥಳೀಯರು ಜಗಳವನ್ನು ಬಿಡಿಸಿ ಮತೀನ್ ಗೆ ಬೈದು ಕಳುಹಿಸಿದ್ದರು. ಇದರಿಂದ ಕುಪಿತನಾದ ಮತೀನ್ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.
ಮರು ದಿನ ರಾತ್ರಿ 7 ಗಂಟೆ ಸುಮಾರಿಗೆ ಮಸೀದಿಯಲ್ಲಿ ನಮಾಜ್ ಮುಗಿಸಿ ಬರುತ್ತಿದ್ದ ಆಯೂಬ್ ಖಾನ್ ಗೆ ಮತೀನ್ ಚಾಕುವಿನಲ್ಲಿ ತಿವಿದಿದ್ದ. ನೀನು ಇರುವವರೆಗೂ ನಾನು ಮಸೀದಿ ಅಧ್ಯಕ್ಷನಾಗುವುದಿಲ್ಲ ಎಂದು ಹೇಳಿ ಚಾಕುವಿನಿಂದ ತಿವಿದು ಮತೀನ್ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಯೂಬ್ ಖಾನ್ ನನ್ನು ವಿಕ್ಟೋರಿಯಾ ಆಸ್ಪತ್ರೆ ಸಮೀಪದ ಏಷಿಯನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಯೂಬ್ ಖಾನ್ ಸಾವನ್ನಪ್ಪಿದ್ದ. ಈ ಸಂಬಂಧ ಆತನ ಪತ್ನಿ ನಾಜಿಮಾ ಖಾನಂ ನೀಡಿದ ದೂರಿನ ಮೇರೆಗೆ ಚಾಮರಾಜಪೇಟೆ ಠಾಣೆ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡಿದ್ದರು. ತಲೆ ಮರೆಸಿಕೊಂಡಿದ್ದ ಮತೀನ್ ನನ್ನು ಕೆಂಗೇರಿ ಸಮೀಪ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ.