ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಆದ ಬಳಿಕ ಮೊದಲ ಬಾರಿಗೆ ತಾಯ್ನಾಡಿಗೆ ಆಗಮಿಸಿದ ಸಿನಿ ಶೆಟ್ಟಿ: ಬಾಲಿವುಡ್ ಪ್ರವೇಶ, ಮಿಸ್ ವರ್ಲ್ಡ್ ಕಿರೀಟಕ್ಕಾಗಿ ಮಿಸ್ ಇಂಡಿಯಾ ಸಿನಿಶೆಟ್ಟಿ ತಯಾರಿ

ಮಂಗಳೂರು, ಜುಲೈ 18: ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ’ ಆದ ಬಳಿಕ ಮೊದಲ ಬಾರಿಗೆ ತನ್ನ ತವರೂರು ಮಂಗಳೂರಿಗೆ ಆಗಮಿಸಿದ್ದಾರೆ. ಅಪ್ಪಟ ತುಳುನಾಡಿನ ಬಂಟ ಮನೆತನ ಹೆಣ್ಣಮಗಳ ರೀತಿ ಸೀರೆಯನ್ನುಟ್ಟು ಹಣೆಗೆ ತಿಲಕವನ್ನಿಟ್ಟು,ಲಕ್ಷ್ಮಿ ಪದಕವಿರುವ ಕೈಗೆ ಬಳೆ ಮತ್ತು ಕಿವಿಯೋಲೆ ಧರಿಸಿ ಮಿಂಚಿದ ಸಿನಿ ಶೆಟ್ಟಿ ಎಲ್ಲರ ಮನಸೂರೆಗೊಳಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸಿನಿಶೆಟ್ಟಿಗೆ ಕುಟುಂಬಿಕರು, ಸ್ನೇಹಿತರು ಅದ್ಧೂರಿ ಸ್ವಾಗತ ಕೋರಿದ್ದು, ಮಿಸ್ ಇಂಡಿಯಾ ಆದರೂ ಎಲ್ಲರ ಜೊತೆ ಸರಳವಾಗಿ ಬೆರೆತು, ಯಾವುದೇ ಹಮ್ಮುಬಿಮ್ಮಿಲ್ಲದೇ ಫೋಟೋಗೆ ಫೋಸ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಫೆಮಿನಾ ಮಿಸ್ ಇಂಡಿಯಾ ವಿನ್ನರ್ ಆದ ಬಳಿಕ ಮೊದಲ ಬಾರಿಗೆ ತಾಯ್ನಾಡಿಗೆ ಆಗಮಿಸಿದ ಸಿನಿ ಶೆಟ್ಟಿಯವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಕ್ದಾಣದಲ್ಲಿ ಆಕೆಯ ಕುಟುಂಬ ವರ್ಗ ಆರತಿ ಎತ್ತಿ ಸ್ವಾಗತಿಸಿದರು. ಬಳಿಕ ಕುಟುಂಬ ವರ್ಗ, ಏರ್ಪೋಟ್ ಬಂದಿರುವ ಪ್ರಯಾಣಿಕರು ಆಕೆಯೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.
ಮಿಸ್ ವರ್ಲ್ಡ್‌ಗೆ ಸಿದ್ದತೆ
ಮಂಗಳೂರು ವಿಮಾನನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, “ನನ್ನನ್ನು ಈ ರೀತಿಯಲ್ಲಿ ಎಲ್ಲರೂ ಸ್ವಾಗತಿಸಿರುವುದು ಬಹಳ ಖುಷಿ ತಂದಿದೆ,ಮಿಸ್ ಇಂಡಿಯಾ ಆಗಿರುವ ಬಗ್ಗೆ ತುಂಬಾ ಖುಷಿಯಿದೆ. ಮುಂದಕ್ಕೆ ಮಿಸ್ ವರ್ಲ್ಡ್ ಆಗುವ ಗುರಿ ಹೊಂದಿದ್ದೇನೆ. ಇದಕ್ಕೆ ತಯಾರಿ ನಡೆಸುತ್ತಿದ್ದೇನೆ. ಉತ್ತಮ ಕಥೆ, ಸ್ಕ್ರಿಪ್ಟ್ ದೊರಕಿದ್ದಲ್ಲಿ ಬಾಲಿವುಡ್ ನಲ್ಲಿ ನಟಿಸುತ್ತೇನೆ” ಎಂದು ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿರುವ ಸಿನಿ ಶೆಟ್ಟಿ ಹೇಳಿದರು.
ಓದು ಮುಗಿಸುವತ್ತಾ ನನ್ನ ಮೊದಲ ಗಮನ
ನಾನು ಇನ್ನೂ ವಿದ್ಯಾರ್ಥಿನಿ. ಮೊದಲಾಗಿ ನಾನು ನನ್ನ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪೂರೈಸಬೇಕು. ಫೆಮಿನಾ ಮಿಸ್ ಇಂಡಿಯಾ ಆಗಿದ್ದು ಒಂದು ಬಹುದೊಡ್ಡ ಪ್ರಯಾಣ. ಇದು ನನಗೆ ಜೀವನದಲ್ಲಿ ಭರವಸೆ ಹಾಗೂ ವಿಶ್ವಾಸವನ್ನು ದೊರಕಿಸಿಕೊಟ್ಟಿದೆ. ಮುಂದಕ್ಕೆ ನಾನು ಮಿಸ್ ವರ್ಲ್ಡ್ ಗೆ ತಯಾರಿ ನಡೆಸುತ್ತಿದ್ದೇನೆ. ಹಾಗಾಗಿ ನನಗೆ ಎಲ್ಲರ ಆಶೀರ್ವಾದ ಬೇಕು” ಅಪ್ಪಟ ಉಡುಪಿ ತುಳುವಿನಲ್ಲಿ
ಮಾಡೆಲ್ ಆಗುವ ಉದ್ದೇಶವಿಲ್ಲ
ನನ್ನ ಹೆತ್ತವರ ಊರು ಉಡುಪಿ. ನನ್ನ ರಜಾದಿನಗಳನ್ನು ಉಡುಪಿಯ ಅಜ್ಜಿ ಮನೆಯಲ್ಲಿ ಕಳೆದಿದ್ದೆ. ಈ ಸಂದರ್ಭ ಮತ್ತೆ ಅಲ್ಲಿಗೆ ಬರುತ್ತಿರುವುದರಿಂದ ಸಂತಸಗೊಂಡಿದ್ದೇನೆ. ಸದ್ಯ ಮಾಡೆಲ್ ಆಗುವ ಉದ್ದೇಶವಿಲ್ಲ. ಐದು ವರ್ಷಗಳ ಕಾಲ ಫೈನಾನ್ಸಿಯಲ್ ಕ್ಷೇತ್ರದಲ್ಲಿ ದುಡಿಯುವ ಆಸಕ್ತಿ ಹೊಂದಿದ್ದೇನೆ. ಆ ಬಳಿಕ ಒಳ್ಳೆಯ ಅವಕಾಶ ಸಿಕ್ಕಲ್ಲಿ ಮಾಡೆಲ್ ಆಗುವ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.
ಭಾರತೀಯ ಉಡುಗೆಯಲ್ಲಿ ಕಂಗೊಳಿಸಿದ ಶೆಟ್ಟಿ ಮಿಸ್ ಇಂಡಿಯಾ
ವೆಸ್ಟರ್ನ್ ಉಡುಗೆಯಲ್ಲಿ ಮುಂಬಯಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿನಿಶೆಟ್ಟಿ, ವಿಮಾನ ನಿಲ್ದಾಣದಿಂಸ ಹೊರಗೆ ಬರುವಾಗ ಅಪ್ಪಟ ಭಾರತೀಯ ಉಡುಗೆಯಲ್ಲಿ ಆಗಮಿಸಿದರು. ವಿಮಾನ ನಿಲ್ದಾಣದ ಒಳಭಾಗದಲ್ಲಿರುವ ಯಕ್ಷಗಾನ ವೇಷಧಾರಿ ಪ್ರತಿಮೆಯ ಮುಂದೆ ಸಿನಿಶೆಟ್ಟಿ ಫೋಟೋ ಕ್ಲಿಕ್ಕಿಸಿಕೊಂಡರು. ವಿಮಾನ ನಿಲ್ದಾಣದ ಹೊರಗೆ ಕಾದುಕುಳಿತಿದ್ದ ಸಂಬಂಧಿಕರು, ಸ್ನೇಹಿತರ ಜೊತೆಗೂ ಫೋಟೋ, ಸೆಲ್ಫಿಗೆ ಫೋಸ್ ನೀಡಿದರು. ಚೆಂಡೆ ವಾದನ ಮಾಡಿದವರ ಜೊತೆಗೂ ಫೋಟೋಗೆ ಸಿನಿ ಶೆಟ್ಟಿ ಫೋಸ್ ನೀಡಿದ್ದಾರೆ.