ಉಕ್ಕಿ ಹರಿದ ಮಾರ್ಕಂಡೇಯ ನದಿ; ಬೆಳಗಾವಿ: ಕಳೆದ ಒಂದೂವರೆ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 775 ಮನೆಗಳು ಕುಸಿದಿವೆ.

ಬೆಳಗಾವಿ: ಕಳೆದ ಒಂದೂವರೆ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 775 ಮನೆಗಳು ಕುಸಿದಿವೆ. ಮನೆಗಳು ಬಿದ್ದ ಪ್ರಮಾಣ ನೋಡಿಕೊಂಡು ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಜೂನ್ 1ರಿಂದ ಜುಲೈ 18ರವರೆಗೆ ಸುರಿದ ಮಳೆಯಲ್ಲಿ ಬಿದ್ದ ಮನೆಗಳ ವರದಿ ಪಡೆಯಲಾಗಿದೆ. ಮೂರು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. 108 ಮನೆಗಳಿಗೆ ತೀವ್ರ ಹಾನಿ, 667 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಸವದತ್ತಿ ತಾಲ್ಲೂಕಿನಲ್ಲಿ 191, ಬೈಲಹೊಂಗಲ ತಾಲ್ಲೂಕಿನಲ್ಲಿ 112, ಚನ್ನಮ್ಮನ ಕಿತ್ತೂರು- 99, ರಾಮದುರ್ಗ- 92, ಚಿಕ್ಕೋಡಿ- 89, ಬೆಳಗಾವಿ ತಾಲ್ಲೂಕಿನಲ್ಲಿ 42 ಮನೆಗಳು ಕುಸಿದಿವೆ. ಇನ್ನೂ ಒಂದಷ್ಟು ಹಳ್ಳಿಗಳಲ್ಲಿ ಸಮೀಕ್ಷೆ ನಡೆದಿದ್ದು ಶೀಘ್ರ ವರದಿ ಬರಲಿದೆ ಎಂದು ಅವರು ಹೇಳಿದರು.
ಗ್ರಾಮ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಬಿದ್ದ ಮನೆಗಳ ವರದಿ ನೀಡುವಲ್ಲಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ. ಶೀಘ್ರ ವರದಿ ಬಂದರೆ ಪರಿಹಾರ ನೀಡಲು ಅನುಕೂಲವಾಗುತ್ತದೆ ಎಂದೂ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಯಾರಿಗೆ, ಎಷ್ಟು ಪರಿಹಾರ: ‘ರಾಜ್ಯ ಸರ್ಕಾರ ಪರಿಷ್ಕೃತ ಪರಿಹಾರ ಘೋಷಿಸಿದೆ. ನದಿ ನೀರು ಮನೆಗೆ ನುಗ್ಗಿದರೆ ₹ 10 ಸಾವಿರ ತುರ್ತು ಪರಿಹಾರ ಹಾಗೂ ಮನೆ ಹಾನಿಗೀಡಾದರೆ ₹ 5 ಲಕ್ಷ ಪರಿಹಾರ ನೀಡಲು ಆದೇಶ ನೀಡಿದೆ. ಪರಿಹಾರ ನೀಡಲು ಹಣದ ಕೊರತೆ ಇಲ್ಲ. ಹಾನಿಗೀಡಾದ ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾಜೀವ್ ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗುವುದು. ನೊಂದವರಿಗೆ ಅಲ್ಲಿಂದ ಪರಿಹಾರ ಮಂಜೂರಾಗಲಿದೆ’ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಬೆಳೆ ಕೊಳೆಯುವ ಭೀತಿ: ಬೆಳಗಾವಿ ತಾಲ್ಲೂಕಿನ ಮಾರ್ಕಂಡೇಯ ನದಿ ಉಕ್ಕೇರಿ ಸುತ್ತಲಿನ ಗದ್ದೆ ಹಾಗೂ ಹೊಲಗಳಿಗೆ ನುಗ್ಗಿದೆ. ಕಳೆದ ಎಂಟು ದಿನಗಳಿಂದ ಭತ್ತ, ಕಬ್ಬು, ಸೋಯಾಬಿನ್, ಬಿಳಿಜೋಳ, ಮೆಕ್ಕೆಜೋಳ ಹಾಗೂ ತರಕಾರಿ ಬೆಳೆಗಳು ನೀರಲ್ಲೇ ನಿಂತಿದ್ದು, ಕೊಳೆಯುವ ಆತಂಕ ಎದುರಾಗಿದೆ.
ಬಿ.ಕೆ.ಕಂಗ್ರಾಳಿ, ಕೆ.ಎಚ್.ಕಂಗ್ರಾಳಿ, ಅಂಬೇವಾಡಿ, ಅಲತಗಾ ಮುಂತಾದ ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗುವ ಆತಂಕ ಎದುರಾಗಿದೆ.
ಬಿದ್ದ ಮನೆಗಳ ಸಮೀಕ್ಷೆ ನಡೆಸಿದಂತೆಯೇ ನೀರು ನುಗ್ಗಿ ಹಾನಿಯಾದ ಹೊಲಗಳ ಸಮೀಕ್ಷೆಯನ್ನೂ ತಕ್ಷಣ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತಗ್ಗದ ನದಿ ನೀರಿನ ಹರಿವು: ಬೆಳಗಾವಿ, ಚಿಕ್ಕೋಡಿ, ಖಾನಾಪುರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಕಳೆದ ಎರಡು ದಿನಗಳಿಂದ ಮಳೆ ಬಿಡುವು ನೀಡಿದೆ. ಆದರೆ, ಮಹಾರಾಷ್ಟ್ರದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಮಟ್ಟ ಯಥಾಸ್ಥಿತಿ ಮುಂದುವರಿದಿದೆ.
ರಾಜ್ಯದ ಗಡಿಗೆ ಹೊಂದಿಕೊಂಡ ರಾಜಾಪುರ ಸೇತುವೆ ಮೇಲೆ ಸೋಮವಾರ 99,875 ಕ್ಯುಸೆಕ್ ಹಾಗೂ ದೂಧಗಂಗಾ ನದಿಯಲ್ಲಿ 27,120 ಕ್ಯುಸೆಕ್ ನೀರು ಹರಿದುಬರುತ್ತಿದೆ. ಇವೆರಡೂ ಸೇರಿಕೊಂಡು ಕೃಷ್ಣಾ ನದಿಗೆ ಕಲ್ಲೋಳ ಸೇತುವೆ ಬಳಿ 1.26 ಲಕ್ಷ ಕ್ಯುಸೆಕ್ ಹರಿವು ಇದೆ.
ಘಟಪ್ರಭಾ ನದಿಗೆ ಹಿಡಕಲ್ ಬಳಿ ನಿರ್ಮಿಸಿದ ರಾಜಾ ಲಖಮಗೌಡ ಜಲಾಶಯದಲ್ಲಿ ಸೋಮವಾರ 2145.156 ಅಡಿ ನೀರು ಭರ್ತಿಯಾಗಿದೆ. ಇದರ ಗರಿಷ್ಠ ಮಟ್ಟ 2175 ಅಡಿ. ಜಲಾಶಯಕ್ಕೆ ನಿರಂತರ 27,683 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 135 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.
ಮಲಪ್ರಭಾ ನದಿಗೆ ನವಿಲುತೀರ್ಥ ಬಳಿ ನಿರ್ಮಿಸಿದ ರೇಣುಕಾಸಾಗರ ಜಲಾಶಯದಲ್ಲಿ ಕೂಡ 2066.50 ಅಡಿ ನೀರು ಭರ್ತಿಯಾಗಿದೆ. ಇದರ ಗರಿಷ್ಠ ಮಟ್ಟ 2079.50 ಅಡಿ. 13,423 ಕ್ಯುಸೆಕ್ ಒಳಹರಿವು ಇದ್ದು, 194 ಕ್ಯುಸೆಕ್ ಮಾತ್ರ ನದಿಗೆ ಹರಿಸಲಾಗುತ್ತಿದೆ.