ನವ್ಯಶ್ರೀ ವಿರುದ್ಧ ದೂರು ನೀಡಿದ ಖಾನಾಪುರ ಸಹಾಯಕ ನಿರ್ದೇಶಕ ಎ.ಡಿ ರಾಜಕುಮಾರ್ ಟಾಕಳೆ
ಬೆಳಗಾವಿ: ಚನ್ನಪಟ್ಟಣದ ಯುವತಿಯೊಬ್ಬರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ. 50 ಲಕ್ಷ ರೂಪಾಯಿ ನೀಡದಿದ್ದರೆ ಅತ್ಯಾಚಾರ ಹಾಗೂ ಸುಲಿಗೆ ಮಾಡಿದ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಖಾನಾಪುರ ಸಹಾಯಕ ನಿರ್ದೇಶಕ ಎ.ಡಿ ರಾಜಕುಮಾರ್ ಟಾಕಳೆ ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚನ್ನಪಟ್ಟಣದ ನವ್ಯಶ್ರೀ ಹಾಗೂ ಅವರ ಸ್ನೇಹಿತ ತಿಲಕರಾಜ ಡಿ.ಟಿ. ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನವ್ಯಶ್ರೀ ಅವರದ್ದು ಎನ್ನಲಾದ ಅತ್ಯಂತ ಖಾಸಗಿತನದ ಕೆಲ ವಿಡಿಯೊಗಳು ಹರಿದಾಡುತ್ತಿವೆ. ಇದನ್ನು ಅಸ್ತ್ರವಾಗಿ ಇಟ್ಟುಕೊಂಡು ನನ್ನ ಮೇಲೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 2020ರಲ್ಲಿ ಬೆಂಗಳೂರಲ್ಲಿ ತಾವು ಕೆಲಸ ಮಾಡುವಾಗ ನವ್ಯಶ್ರೀ ಅವರ ಪರಿಚಯವಾಯಿತು. ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡು ಸ್ನೇಹ ಬೆಳೆಸಿದ್ದರು. ತಮಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ ಎಂದು ಗೊತ್ತಿದ್ದರೂ ತಮ್ಮೊಂದಿಗೆ ಸಲುಗೆ ಬೆಳೆಸಿಕೊಂಡರು ಎಂದು ದೂರಿನಲ್ಲಿ ಹೇಳಲಾಗಿದೆ.
ಒಂದೂವರೆ ವರ್ಷದ ಪರಿಚಯದಲ್ಲಿ ಬೆಳಗಾವಿಯೂ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ನಾವು ಸೇರಿದ್ದೆವು ಎಂದೂ ರಾಜಕುಮಾರ ದೂರಿನಲ್ಲಿ ತಿಳಿಸಿದ್ದಾರೆ.
2021ರ ಡಿಸೆಂಬರ್ 24ರಂದು ನವ್ಯಶ್ರೀ ಕರೆ ಮಾಡಿ ಬೆದರಿಕೆ ಹಾಕಿದರು. ನವ್ಯಶ್ರೀ ಹಾಗೂ ತಾವು ಆತ್ಮೀಯವಾಗಿ ಇರುವ ವಿಡಿಯೊ ಇಟ್ಟುಕೊಂಡು ಅವರು ಹಾಗೂ ತಿಲಕರಾಜ ಕೂಡ ಬೆದರಿಕೆ ಒಡ್ಡಿದರು. 50 ಲಕ್ಷ ರೂಪಾಯಿ ಹಣ ನೀಡಬೇಕು.
ಇಲ್ಲದಿದ್ದರೆ ತಮ್ಮ ಪತ್ನಿ ಮತ್ತು ಸಂಬಂಧಿಕರಿಗೆ ವೀಡಿಯೊ ತೋರಿಸಲಾಗುವುದು ಎಂದು ಹೆದರಿಸಿದ್ದಾರೆ. ಆದ್ದರಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.