Karnataka News
PSI ಹಗರಣದಲ್ಲಿ ಸಿಲುಕಿಸಿರುವುದು ದುರದೃಷ್ಟಕರ: ಕೋರ್ಟ್ ಗೆ ಲಿಖಿತ ಮನವಿ ಸಲ್ಲಿಸಿದ ಅಮೃತ್ ಪೌಲ್

ಬೆಂಗಳೂರು, ಜು.19: ಕ್ರಿಮಿನಲ್ ಹಿನ್ನೆಲೆ ಇಲ್ಲದ ತಮ್ಮನ್ನು ಶಂಕಾಸ್ಪದ ವಿಚಾರಗಳನ್ನು ಆಧರಿಸಿ ಪಿಎಸ್ಸೈ ನೇಮಕಾತಿ ಅಕ್ರಮ ಹಗರಣದಲ್ಲಿ ಆರೋಪಿಯನ್ನಾಗಿ ಮಾಡಿರುವುದು ದುರದೃಷ್ಟಕರ ಎಂದು ಪೊಲೀಸ್ ನೇಮಕಾತಿ ವಿಭಾಗದ ಅಂದಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ ಅವರು ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್‍ಗೆ ಸಲ್ಲಿಕೆ ಮಾಡಿರುವ ಲಿಖಿತ ಮನವಿಯಲ್ಲಿ ತಿಳಿಸಿದ್ದಾರೆ.
ಜಾಮೀನು ಕೋರಿ ಅಮೃತ್ ಪೌಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮ್ಯಾಜಿಸ್ಟ್ರೇಟ್ ಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಕೀಲರು, ಜಾಮೀನಿಗಾಗಿ ಉಲ್ಲೇಖಿಸಿರುವ ಹಾಗೂ ಅದರ ಪೂರಕವಾಗಿ ಲಿಖಿತ ವಾದವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಪಿಎಸ್ಸೈ ನೇಮಕಾತಿ ಅಕ್ರಮ ಹಗರಣದಲ್ಲಿ ಆರೋಪಿಯಾಗಿರುವ ಪೌಲ್ ಅವರು ಮುಗ್ಧರಾಗಿದ್ದು, ಐಪಿಸಿ ಸೆಕ್ಷನ್‍ಗಳಾದ 120ಬಿ, 465, 468, 471, 409 ಮತ್ತು 34ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂಬ ಅಂಶಗಳು ಸೇರಿ ಹಲವು ಪ್ರಮುಖ ಅಂಶಗಳು ಲಿಖಿತ ವಾದದಲ್ಲಿಯಿವೆ.