ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿಎಸ್‌ಪಿ ಸುರೇಂದರ್ ಸಿಂಗ್ ಮೇಲೆ ಟ್ರಕ್ ಹರಿಸಿ ಹತ್ಯೆ ಚಾಲಕನ ಮೇಲೆ ಗುಂಡು ಹಾರಿಸಿದ ಪೊಲೀಸರು

ಗುರುಗ್ರಾಮ: ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿಎಸ್‌ಪಿ ಸುರೇಂದರ್ ಸಿಂಗ್ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿದ್ದ ಚಾಲಕನ ಮೇಲೆ ಹರಿಯಾಣ ಪೊಲೀಸರು ಗುಂಡು ಹಾರಿಸಿದ್ದಾರೆ.
ನುಹ್ ಪ್ರದೇಶದಲ್ಲಿ ಈ ಶೂಟೌಟ್ ನಡೆದಿದ್ದು, ಗಾಯಗೊಂಡಿರುವ ವ್ಯಕ್ತಿ ಡಿಎಸ್‌ಪಿ ಮೇಲೆ ಲಾರಿ ಹರಿಸಿದ ಚಾಲಕ ಎಂದು ಪೊಲೀಸರು ಹೇಳಿದ್ದಾರೆ.
ದಾಖಲೆ ಪರಿಶೀಲನೆಗೆ ಟ್ರಕ್ ನಿಲ್ಲಿಸುವಂತೆ ಡಿಎಸ್‌ಪಿ ಸಿಗ್ನಲ್ ಮಾಡಿದ್ದರು. ಆದರೆ, ಚಾಲಕ ಟ್ರಕ್ ಅನ್ನು ಮತ್ತಷ್ಟು ವೇಗವಾಗಿ ಓಡಿಸಿ ಟ್ರಕ್ ಗುದ್ದಿಸಿ ಕೊಂದಿದ್ದ. ಡಿಎಸ್‌ಪಿ ಅವರ ಜೊತೆಗಿದ್ದ ಗನ್‌ಮ್ಯಾನ್ ಮತ್ತು ಚಾಲಕ ಪಕ್ಕ್ಕಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಡಿಎಸ್‌ಪಿ ಅಸುನೀಗಿದ್ದರು.
ಪಂಚಗಾಂವ್ ಪ್ರದೇಶದ ಅರವಳ್ಳಿ ಹಿಲ್ಸ್ ಪ್ರದೇಶದ ಅಕ್ರಮ ಕಲ್ಲುಗಾರಿಕೆ ತಡೆಗೆ ಡಿಎಸ್‌ಪಿ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ವೇಳೆ ಕೊಲೆ ನಡೆದಿದೆ.
ಹತ್ಯೆ ಮಾಡಿದ ಚಾಲಕ ಮತ್ತು ಟ್ರಕ್ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಚಾಲಕನನ್ನು ಗುರುತಿಸಿದ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.