ಸಬ್ ರಿಜಿಸ್ಟರ್ ಕಚೇರಿಗಳ ಕರ್ಮಕಾಂಡ ಲೋಕಾಯುಕ್ತ ದಾಳಿಯಲ್ಲಿ ಬಯಲು ಬೆಂಗಳೂರಿನ 43 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ದಾಳಿ

ಬೆಂಗಳೂರು, ಜು. 19: ಕಂದಾಯ ಸಚಿವ ಅರ್. ಅಶೋಕ್ ಅವರ ವ್ಯಾಪ್ತಿಗೆ ಒಳಪಡುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ದುರಾಡಳಿತ ಪರಕಾಷ್ಠೆಗೆ ತಲುಪಿದೆ. ಉಪ ನೋಂದಣಾಧಿಕರಿಗಳ ಕಚೇರಿಗಳ ದುರಾಡಳಿತ, ಕರ್ತವ್ಯಲೋಪ, ನಿರ್ಲಕ್ಷ್ಯತೆ, ಜನ ಪರವಿಲ್ಲದ ಆಡಳಿತದ ಬಗ್ಗೆ ಸ್ವಯಂ ಪ್ರೇರಿತ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾ.
ಬಿ.ಎಸ್. ಪಾಟೀಲ್ ಆದೇಶಿಸಿದ್ದಾರೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಒಳಗೊಂಡಂತೆ ಇಲಾಖೆಗಳ ಮುಖ್ಯಸ್ಥರು ಹಾಗೂ ಉಪ ನೋಂದಣಾಧಿಕಾರಿಗಳನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಪ್ರತಿ ಉಪ ನೋಂದಣಾಧಿಕಾರಿ ಕಚೇರಿವಾರಿ ಅಲ್ಲಿನ ಅವ್ಯವಸ್ಥೆಗಳ ಪಟ್ಟಿ ಮಾಡಿರುವ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್, ಈ ಕುರಿತು ವರದಿ ಸಲ್ಲಿಸಲು ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಸೆ. 6 ರೊಳಗೆ ಉಪ ನೊಂದಣಾಧಿಕಾರಿ ಕಚೇರಿಯ ಅಕ್ರಮದ ಬಗ್ಗೆ ವರದಿ ನೀಡಲು ಸೂಚಿಸಿದ್ದಾರೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ನ್ಯಾ. ಬಿ.ಎಸ್. ಪಾಟೀಲ್, ಉಪ ನೊಂದಣಾಧಿಕಾರಿಗಳ ಕಚೇರಿಗಳಲ್ಲಿನ ಭ್ರಷ್ಟಾಚಾರ ಬಗ್ಗೆ ಸಾರ್ವಜನಿಕರು ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು, ಲೋಕಾಯುಕ್ತ ನ್ಯಾಯಮೂರ್ತಿಗಳು ಬೆಂಗಳೂರಿನ ವಿವಿಧ ಉಪ ನೋಂದಣಾಧಿಕಾರಿ ಕಚೇರಿಗಳ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಉಪ ನೋಂದಣಾಧಿಕಾರಿಗಳ ಕಚೇರಿಯಗಳಲ್ಲಿನ ದುರಾಡಳಿತ ಬಯಲಿಗೆ ಬಂದಿತ್ತು. ಉಪ ನೊಂದಣಾಧಿಕಾರಿ ಕಚೇರಿಗಳಲ್ಲಿನ ದುರಾಡಳಿತ ಪಟ್ಟಿ ಮಾಡಿರುವ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರು, ಉಪ ಲೋಕಾಯುಕ್ತ ನ್ಯಾ. ಕೆ.ಎನ್ ಫಣೀಂದ್ರ , ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಅದರಂತೆ ಸ್ವಯಂ ಪ್ರೇರಿತ ಕೇಸು ದಾಖಲಿಸಿ ತನಿಖೆಗೆ ಸೂಚಿಸಿದ್ದಾರೆ. ಲೋಕಾಯುಕ್ತರ ಆದೇಶದ ಮೇರೆಗೆ ಸ್ವಯಂ ಪ್ರೇರಿತ ಕೇಸಿನ ತನಿಖೆಯೂ ಶುರುವಾಗಿದೆ.
ಬೆಂಗಳೂರಿನ 43 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ದಾಳಿ:
ಬೆಂಗಳೂರು ನಗರ ಜಿಲ್ಲೆಯ 43 ಉಪ ನೋಂದಣಾಧಿಕಾರಿಗಳ ಕಚೇರಿ ಮೇಲೆ ದಾಳಿ ಮಾಡಿದ್ದು, ಅಲ್ಲಿನ ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಕಚೇರಿ ವಾರು ಅಂಶಗಳನ್ನು ಲೋಕಾಯುಕ್ತ ಸಂಸ್ಥೆ ಪಟ್ಟಿ ಮಾಡಿದೆ. ಬಹುತೇಕರು ಕರ್ತವ್ಯದ ವೇಳೆ ಗುರುತಿನ ಚೀಟಿ ಧರಿಸಿಲ್ಲ. ಅಧಿಕಾರಿಗಳ ಹೆಸರು, ಪದನಾಮದ ಫಲಕಗಳನ್ನು ಸಾರ್ವಜನಿಕರಿಗೆ ಪ್ರದರ್ಶನ ಮಾಡಿಲ್ಲ. ಸಿಸಿಟಿವಿ ಕ್ಯಾಮರಾಗಳು ಕೆಲಸ ನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಂದ ಮಧ್ಯವರ್ತಿಗಳು ಹಣ ಪಡೆದು ಭ್ರಷ್ಟಾಚಾರ ಮಾಡುತ್ತಿದ್ದಾರೆ. ರಿಜಿಸ್ಟರ್ 45 ಸರಿಯಾಗಿ ನಿರ್ವಹಣೆ ಮಾಡಿಲ್ಲ. ಆಸ್ತಿ ನೋಂದಣಿ ಸಾಪ್ಟ್‌ವೇರ್ ಕಾವೇರಿ ಸರಿಯಾಗಿ ನಿರ್ವಹಿಸದೇ ಸಾರ್ವನಿಕರಿಗೆ ತೊಂದರೆ ನೀಡಲಾಗುತ್ತಿದೆ. ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ನಗದು ಪುಸ್ತಕ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.