ಬಡವರ ಬದುಕಿನ ಮೇಲೆ ಪ್ರಹಾರ ನಡೆಸಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಎಸ್‍ಡಿಪಿಐ ಪ್ರತಿಭಟನೆ

ಹಾಲು, ಮೊಸರು, ಮಜ್ಜಿಗೆಯಂತಹ ದಿನ ಬಳಕೆಯ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ಬದುಕಿನ ಮೇಲೆ ಪ್ರಹಾರ ನಡೆಸಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಎಸ್‍ಡಿಪಿಐ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿಯ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಎಸ್‍ಡಿಪಿಐ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ನಾಮಫಲಕಗಳನ್ನು ಹಿಡಿದುಕೊಂಡು, ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ತೆರಿಗೆ ನೀತಿ ಬಡವರ ತಿನ್ನುವ ಅನ್ನಕ್ಕೂ ಕಲ್ಲು ಹಾಕಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್, ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಕಂಗೆಟ್ಟಿರುವ ಮಧ್ಯಮ ವರ್ಗ ಮತ್ತು ಬಡವರ ಬದುಕು ಜಿಎಸ್‍ಟಿ ಹೆಚ್ಚಳದಿಂದ ಮತ್ತಷ್ಟು ದುರ್ಬರವಾಗಲಿದೆ. ಕಳೆದ ಬಾರಿ ಜಿಎಸ್‍ಟಿಯನ್ನು ಜಾರಿಗೆ ತರುವ ವೇಳೆ ಪ್ರಧಾನಿ ಮೋದಿಯವರು ಈ ಹಿಂದಿನ ಸರ್ಕಾರಗಳು ಅಕ್ಕಿ ಮತ್ತು ಹಾಲಿಗೂ ತೆರಿಗೆ ಪಡೆಯುತ್ತಿತ್ತು.
ನನ್ನ ಸರ್ಕಾರ ಯಾವುದೇ ಕಾರಣಕ್ಕೂ ಅಕ್ಕಿ ಮತ್ತು ಹಾಲಿಗೆ ಜಿಎಸ್‍ಟಿ ಪಡೆಯುವುದಿಲ್ಲ ಎಂದಿದ್ದರು. ಇದೀಗ ಪ್ರಧಾನಿ ಮೋದಿಯವರು ಎಂದಿನಂತೆ ಮಾತು ತಪ್ಪಿದ್ದು, ಸರ್ಕಾರ ಹಗಲು ದರೋಡೆಗಿಳಿದಿದೆ. ಕ್ರೂರ ಸರ್ಕಾರದಿಂದ ಮಾತ್ರ ಇಂತಹ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಮುಖಂಡರಾದ ವಾಸಿಂ ಅಸ್ಲಾಂ, ಅಬ್ದುಲ್ ಹಮೀದ್, ಇಮ್ರಾನ್ ಮುಲ್ಲಾ, ನವಾಜ್ ಮುಲ್ಲಾ, ಸಮೀರ ಪಾರಿಶ್ವಾಡ, ಎಂ.ಡಿ.ಕೈಫ್, ಸೋಪಿಯಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.