ಅಪ್ಪು ಫಸ್ಟ್ ಪೋಸ್ಟರ್ ವೈರಲ್; ಅಂದು ಕೊಟ್ಟ ಮಾತು ತಪ್ಪಿದ್ರಾ ಅಪ್ಪು?

ತಿಂಗಳುಗಳೇ ಕಳೆದ್ರು, ಅಪ್ಪು ಅಗಲಿಕೆಯ ನೋವು ಮಾತ್ರ ಅಭಿಮಾನಿಗಳ ಮನಸ್ಸಿನಿಂದ ಕರಗುತ್ತಿಲ್ಲ. ಫೇಸ್ಭುಕ್, ವಾಟ್ಸ್ ಆಪ್, ಇನ್‌ಸ್ಟಾ ಹೀಗೆ ಎಲ್ಲದರೂ ಸರಿ, ದಿನಕ್ಕೊಮ್ಮೆ ಆದ್ರು, ಪುನೀತ್ ಫೋಟೊ, ವೀಡಿಯೋ ಕಣ್ಣಿಗೆ ಬೀಳುತ್ತೆ. ಈ ಒಂಭತ್ತು ತಿಂಗಳಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ.
ಇದೀಗ ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಚಿತ್ರದ ಮೊದಲ ಪೋಸ್ಟರ್ ಸಖತ್ ವೈರಲ್ ಆಗಿದೆ. ಆ ಪೋಸ್ಟರ್‌ನಲ್ಲಿರೋ ಸಾಲುಗಳು ಅಭಿಮಾನಿಗಳ ಮನಕಲಕುತ್ತಿದೆ. ಪುನೀತ್ ರಾಜ್‌ಕುಮಾರ್ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’. ಟಾಲಿವುಡ್ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ಪುನೀತ್ ರಾಜ್‌ಕುಮಾರ್ ಸಿನಿಕರಿಯರ್‌ಗೆ ಭದ್ರ ಬುನಾದಿ ಹಾಕಿತ್ತು. ದೊಡ್ಮನೆಯ ಪ್ರೀತಿಯ ಅಪ್ಪು, ಈ ಸಿನಿಮಾ ನಂತ್ರ ಅಭಿಮಾನಿಗಳ ಪ್ರೀತಿಯ ಅಪ್ಪು ಆಗಿಬಿಟ್ಟರು. ಆ ಚಿತ್ರದ ಪ್ರತಿ ಹಾಡು, ಪ್ರತಿ ದೃಶ್ಯ, ಪ್ರತಿ ಸಂಭಾಷಣೆ ಅಭಿಮಾನಿಗಳು ಇನ್ನು ಮರೆತ್ತಿಲ್ಲ.
ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪುನೀತ್ ರಾಜ್‌ಕುಮಾರ್ ಚಿಕ್ಕಂದಿನಲ್ಲೇ ನ್ಯಾಷನಲ್ ಅವಾರ್ಡ್ ಗೆದ್ದವರು. ಆದರೆ ‘ಪರಶುರಾಮ್’ ಸಿನಿಮಾ ನಂತ್ರ ನಟನೆಗೆ ಗುಡ್‌ಬೈ ಹೇಳಿದ್ರು. ಬಹಳ ವರ್ಷಗಳ ನಂತ್ರ ಮತ್ತೆ ಹೀರೋ ಆಗಬೇಕು ಅಂತ ಮನಸ್ಸು ಮಾಡಿದಾಗ ಶುರುವಾದ ಸಿನಿಮಾ ‘ಅಪ್ಪು’. ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಪುನೀತ್ ಲಾಂಚಿಂಗ್ ಸಿನಿಮಾಗೆ ವಿಭಿನ್ನ ಕಥೆ ಸಿದ್ಧಪಡಿಸಿದ್ದರು. ಅಣ್ಣಾವ್ರು, ವರದಣ್ಣ ಕಥೆ ಹೇಳಿ ಮೆಚ್ಚಿಕೊಂಡಿದ್ದರು.
ಪುನೀತ್ ರಾಜ್‌ಕುಮಾರ್ ಅವರನ್ನು ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಅಪ್ಪು ಅಂತ ಕರೆಯುತ್ತಿದ್ದರು. ಇದೇ ಟೈಟಲ್ ಕಥೆಗೆ ಚೆನ್ನಾಗಿರುತ್ತೆ ನಿರ್ಧರಿಸಿದರು. ಫೋಟೊ ಶೂಟ್ ಮಾಡಿಸಿ, 22 ಆಗಸ್ಟ್ 2001ರಂದು ಗೌರಿ ಗಣೇಶ ಹಬ್ಬದ ದಿನ ಪೋಸ್ಟರ್ ಸಮೇತ ಅಪ್ಪು ಸಿನಿಮಾ ಘೋಷಣೆ ಆಯಿತು. ಅದು ಸೋಷಿಯಲ್ ಮೀಡಿಯಾ ಇಲ್ಲದ ಕಾಲ. ಹಾಗಾಗಿ ಹಬ್ಬದ ದಿನ ದಿನಪತ್ರಿಕೆಗಳಲ್ಲಿ ಸಿನಿಮಾ ಘೋಷಣೆ ಸುದ್ದಿ ನೋಡಿ ಸಿನಿರಸಿಕರು ತಿಳಿದುಕೊಂಡಿದ್ದರು. ಅಂದು ದಿನಪತ್ರಿಕೆಯಲ್ಲಿ ಅಚ್ಚಾಗಿದ್ದ ಪೋಸ್ಟರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪೋಸ್ಟರ್‌ನಲ್ಲಿ ಬರೆದಿರೋ ಸಾಲುಗಳು ಅಭಿಮಾನಿಗಳ ಕರಳು ಹಿಂಡುತ್ತಿದೆ.
ಅಂದು ಅಪ್ಪು ಕೊಟ್ಟ ಮಾತೇನು?
‘ಅಪ್ಪು’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರ ಏನು ಅನ್ನೋದನ್ನು ಪೋಸ್ಟರ್‌ನಲ್ಲಿ ಬರೆದು ಹೇಳುವ ಪ್ರಯತ್ನ ಮಾಡಿದ್ದರು. ‘ಅವನು ಭಾರೀ ಮೊಂಡ, ಬಲು ಕೋಪಿಷ್ಠ, ಪಕ್ಕಾ ಪೋಕರಿ, ಇತ್ಯಾದಿ ಇತ್ಯಾದಿ, ಆದರೂ ತುಂಬಾ ಒಳ್ಳೆಯವನು, ನಿಮ್ಮ ಜೊತೆಯಲ್ಲಿಯೇ ಇರುವವನು, ಅವನು ಯಾರು ಗೊತ್ತಾ..? – ಅಪ್ಪು’ ಅಂತ ಪರಿಚಯ ಮಾಡಿಕೊಡಲಾಗಿತ್ತು. ‘ನಿಮ್ಮ ಜೊತೆಯಲ್ಲಿಯೇ ಇರುವವನು’ ಅಂತ ಹೇಳಿ ಮಾಯ ಆಗಿಬಿಟ್ಟರು. ಕೊಟ್ಟ ಮಾತು ತಪ್ಪಿದರು ಅಂತ ಅಭಿಮಾನಿಗಳು ಪೋಸ್ಟರ್ ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅಪ್ಪು- ಸುಚಿತ್ರಾ ಜೋಡಿ ಮೋಡಿ
2002ರಲ್ಲಿ ರಿಲೀಸ್ ಆಗಿದ್ದ ಅಪ್ಪು ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ ರಕ್ಷಿತಾ ನಟಿಸಿದ್ದರು. ಅವರಿಗೂ ಅದು ಮೊದಲ ಸಿನಿಮಾ. ಇಬ್ಬರು ಕಾಲೇಜ್ ಸ್ಟೂಡೆಂಟ್ಸ್ ಪಾತ್ರಗಳಲ್ಲಿ ಕಮಾಲ್ ಮಾಡಿದ್ದರು. ಪೂರಿ ಜಗನ್ನಾಥ್ ನಿರ್ದೇಶನ, ಗುರುಕಿರಣ್ ಮ್ಯೂಸಿಕ್, ಪುನೀತ್- ರಕ್ಷಿತಾ ಅಭಿನಯ ಎಲ್ಲಾ ಸೇರಿ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿತ್ತು.
ಹೋಂ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ
ಪುನೀತ್ ರಾಜ್‌ಕುಮಾರ್ ಹೀರೊ ಆಗ್ತಾರೆ ಅಂದಾಗ ಸಾಕಷ್ಟು ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬಂದಿದ್ದರು. ಆದರೆ ಪಾವರ್ತಮ್ಮ ರಾಜ್‌ಕುಮಾರ್ ಮಗನನ್ನು ತಾವೇ ಲಾಂಚ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ತಮ್ಮದೇ ಬ್ಯಾನರ್‌ನಲ್ಲಿ ಒಳ್ಳೆ ತಂತ್ರಜ್ಞರು ಮತ್ತು ಕಲಾವಿದರ ತಂಡ ಕಟ್ಟಿಕೊಂಡು ಅಪ್ಪು ಸಿನಿಮಾ ನಿರ್ಮಾಣ ಮಾಡಿ ಗೆದ್ದರು.
ಸತತ 200 ದಿನ ಪ್ರದರ್ಶನ ಕಂಡಿದ್ದ ‘ಅಪ್ಪು’
ಸಿನಿಮಾದಲ್ಲಿ ಡ್ಯಾಶಿಂಗ್ ಕಾಲೇಜ್ ಹುಡುಗನಾಗಿ ಪುನೀತ್ ರಾಜ್‌ಕುಮಾರ್ ಸಕ್ಸಸ್ ಕಂಡಿದ್ದರು. ಅಪ್ಪು ಡ್ಯಾನ್ಸ್, ಫೈಟ್ಸ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಆ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಿಕ್ಕಂತಾಗಿತ್ತು. ಸಿನಿಮಾ 200 ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಅಂದಿನಿಂದ ಪುನೀತ್ ರಾಜ್‌ಕುಮಾರ್ ಅವರನ್ನು ಎಲ್ಲರೂ ಅಪ್ಪು ಅಂತಲೇ ಕರೆಯಲು ಆರಂಭಿಸಿದರು.
‘ಅಪ್ಪು’ ಸಿನಿಮಾ 4 ಭಾಷೆಗಳಿಗೆ ರೀಮೇಕ್
ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ ‘ಅಪ್ಪು’ ಸಿನಿಮಾ ಮುಂದೆ ತಮಿಳು, ತೆಲುಗು, ಬೆಂಗಾಳಿ ಮತ್ತು ಬಾಂಗ್ಲಾದೇಶದ ಬೆಂಗಾಳಿ ಭಾಷೆಗಳಿಗೆ ರೀಮೇಕ್ ಆಗಿದ್ದು ವಿಶೇಷ. ಮೊದಲ ಸಿನಿಮಾದಲ್ಲೇ ಸೂಪರ್ ಸಕ್ಸಸ್ ಕಂಡ ಪುನೀತ್ ರಾಜ್‌ಕುಮಾರ್ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದರು.