Sathosh Patil Suicide Case: ಈಶ್ವರಪ್ಪ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಎಂದ ಸಂತೋಷ್ ಪಾಟೀಲ್ ಪತ್ನಿ, ಮೋದಿ ಬಳಿ ನ್ಯಾಯ ಕೇಳಲು ನಿರ್ಧಾರ

ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ : ಸಂತೋಷ್ ಪಾಟೀಲ್ ಪತ್ನಿ ಆಕ್ರೋಶ
“ಡೆತ್ ನೋಟ್ ಪರಿಗಣಿಸಬೇಕು”
ನನ್ನ ಗಂಡ ಬರೆದ ಡೆತ್ ನೋಟ್ ಅನ್ನು ಪರಿಗಣಿಸಬೇಕು. ವಾಟ್ಸಪ್ ನಲ್ಲಿ ಬರೆದಿದ್ದಾರೆ ಅಂತಾ ಹೇಳ್ತಿದ್ದಾರೆ. ಆದರೀಗ ನಾನು ಕೂಡ ನನ್ನ ಗಂಡನ ಸಾವಿಗೆ ಈಶ್ವರಪ್ಪ ಕಾರಣ ಅಂತಾ ಕೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸಾಯುತ್ತೇನೆ. ಅದನ್ನಾದರೂ ಪೊಲೀಸರು ಒಪ್ಪುತ್ತಾರಾ? ಸತ್ಯಾಸತ್ಯೆತೆ ಹೊರಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
“ತನಿಖೆ ಮೇಲೆ ಈಶ್ವರಪ್ಪ ಪ್ರಭಾವ”
ಈಶ್ವರಪ್ಪನವರು ಪ್ರಭಾವ ಬಳಸಿದ್ದಾರೆ. ಅದಕ್ಕಾಗಿಯೇ ಸಾಕ್ಷಿ ಇಲ್ಲ ಅಂತಿದ್ದಾರೆ. ಅವರ ಪರವಾಗಿಯೇ ತನಿಖೆ ಆಗ್ತಿದೆ ಅಂತಾ ಅನುಮಾನ ಬಂದು ನಾವು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ತನಿಖಾಧಿಕಾರಿಗಳು ಹತ್ತು ದಿನಗಳಲ್ಲಿ ಮೂರು ನೋಟಿಸ್ ಕೊಟ್ಟಿದ್ದಾರೆ. ನಾವು ಪೋನ್ ಮಾಡಿದ್ರು ಯಾರು ನಮ್ಮ ಪೋನ್ ರಿಸಿವ್ ಮಾಡಿಲ್ಲ. ನ್ಯಾಯಯುತವಾಗಿ ತನಿಖೆ ಆಗಲಿ ನನ್ನ ಗಂಡನಿಗೆ ನ್ಯಾಯ ಸಿಗಲಿ ಅಂತಾ ಮನವಿ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಆಡಳಿತ ಪಕ್ಷ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಆದ್ರೆ, ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ ಅಂತಾ ಅನಿಸುತ್ತಿದೆ. ಅವರ ಪರವಾಗಿಯೇ ತನಿಖೆ ನಡೆಯುತ್ತಿದ್ದು ಅದೀಗ ನಿಜವಾಗಿದೆ. ನಮಗೆ ಮೀಡಿಯಾದಲ್ಲಿ ಬಂದಾಗ ಗೊತ್ತಾಗಿದೆ. ನಮಗೂ ಒಂದು ಲೇಟರ್ ಕೊಡಬೇಕಿತ್ತು. ಎಲ್ಲಿಯೂ ಈಶ್ವರಪ್ಪ ತನಿಖೆಗೆ ಒಳಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಮಗಾರಿ ನಡೆಯದಿರುವ ಬಗ್ಗೆ ಯಾರು ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಸರ್ಕಾರಿ ಕಾಮಗಾರಿಗಳು ಮಾಡುವ ಸಂದರ್ಭದಲ್ಲಿ ಅನುಮತಿ ಇರುವ ಬಗ್ಗೆ ಯಾರಾದರೂ ನೋಟಿಸ್ ಕೊಟ್ಟು ಕೆಲಸವನ್ನು ಬಿಡಿಸಬೇಕಿತ್ತು. ಅದನ್ನು ಯಾಕೆ ಮಾಡಲಿಲ್ಲ. ಎಲ್ಲರೂ ಆಗ ಕಣ್ಮುಚ್ಚಿ ಕುಳಿತಿದ್ದಾರೆ. ಈ ವ್ಯವಸ್ಥೆಯಲ್ಲೇ ತಪ್ಪಿದೆ ಎಂದರು.
“ಈಶ್ವರಪ್ಪ 40% ಕಮಿಷನ್ ಕೇಳಿದ್ದು ನಿಜ”
ಸದ್ಯ ಪೂರ್ತಿ ಪ್ರಭಾವ ಬಳಿಸಿಕೊಂಡು ತನಿಖೆಯನ್ನು ತಮ್ಮಕಡೆ ಮಾಡಿಕೊಂಡಿದ್ದಾರೆ. ಪೊಲೀಸ್ ಅವರು ಹೇಳಿದ ಹಾಗೆ ಕೇಳಿ ‘ಬಿ’ ರಿಪೋರ್ಟ್ ಮಾಡಿದ್ದಾರೆ. ನಮಗೆ ನ್ಯಾಯ ಕೊಡಲೇಬೇಕು ನನ್ನ ಗಂಡ ಕಾಮಗಾರಿ ಮಾಡಿಸಿದ್ದು ನಿಜವಿದೆ. ಈಶ್ವರಪ್ಪ 40% ಕಮಿಷನ್ ಕೇಳಿದ್ದು ನಿಜವಿದೆ. ನನ್ನ ಗಂಡ ದುಡ್ಡು ಹೊಂದಿಸುತ್ತಿದ್ದರು. ಆರ್ ಡಿಪಿಆರ್ ಇಲಾಖೆ ಶ್ರೀನಿವಾಸ ಎಂಬುವವರಿಗೆ ಹತ್ತು ಲಕ್ಷ ಹಣ ಕೊಟ್ಟಿದ್ದಾರೆ ಎಂದರು.
“ಪ್ರಕರಣ ಮುಚ್ಚಿ ಹಾಕಲು ಯತ್ನ”
ನನ್ನ ಗಂಡನ ಕಳೆದುಕೊಂಡ ಮೂರು ತಿಂಗಳಾಗಿದೆ. ನಮ್ಮನ್ನು ಅನಾಥ ಮಾಡಿದ್ದಾರೆ. ಈ ಸರ್ಕಾರ ನನಗೆ ನ್ಯಾಯ ಕೊಡಿಸುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಸಚಿವರ ಪರಿಹಾರದ ಭರವಸೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿಯವರೆಗೂ ಏನು ಚರ್ಚೆ ಆಗಿಲ್ಲ. ಸಾಕಷ್ಟು ಭರವಸೆ ಕೊಟ್ಟಿದ್ದರು. ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ. ನನ್ನ ಗಂಡ ಕಾಮಗಾರಿಗೆ ಜೀವ ಕೊಟ್ಟಿದ್ದಾರೆ. ಅದರ ಪರಿಹಾರವೂ ಬಂದಿಲ್ಲ. ರಾಜಕೀಯಕ್ಕಾಗಿ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಅಂತ ಆರೋಪಿಸಿದ್ರು.
“ಪ್ರಧಾನಿ ಬಳಿ ನ್ಯಾಯಕೇಳುತ್ತೇನೆ”
ಈಶ್ವರಪ್ಪ ವಿರುದ್ಧ ಕ್ರಮ ಆಗಬಹುದು ಅಂತಾ ಭರವಸೆ ಇತ್ತು. ಆದರೀಗ ಬಿ ರಿಪೋರ್ಟ್ ನೋಡಿದ್ಮೇಲೆ ಸುಳ್ಳಾಗಿದೆ. ಆದ್ರೆ, ನಾವು ಇದನ್ನ ಒಪ್ಪುವುದಿಲ್ಲ. ನ್ಯಾಯ ಸಿಗಲಿಲ್ಲ ಅಂದ್ರೆ ಪ್ರದಾನಿ ಮೋದಿ ಬಳಿಗೆ ಹೋಗುತ್ತೇನೆ. ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದರು.