ಶಿರೂರು ಟೋಲ್ ಪ್ಲಾಜಾ ದುರಂತ: ಚಾಲಕನ ವಿರುದ್ಧ ಕೇಸು ದಾಖಲು

ಕುಂದಾಪುರ: ಶಿರೂರು ಟೋಲ್ ಪ್ಲಾಜಾದ ಕಂಬಕ್ಕೆ ಆಯಂಬುಲೆನ್ಸ್ ಢಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಅವಘಢದಲ್ಲಿ ಗಾಯಗೊಂಡ ಐವರ ಪೈಕಿ ಚಾಲಕ ರೋಶನ್ ರೋಡ್ರಿಗಸ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಬಾಕಿ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಆಯಂಬುಲೆನ್ಸ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ.
ಹೊನ್ನಾವರದಿಂದ ರೋಗಿ ಯೊಬ್ಬರನ್ನು ಬುಧವಾರ ಸಂಜೆ ತುರ್ತು ಚಿಕಿತ್ಸೆಗೆಂದು ಉಡುಪಿಗೆ ಕರೆತರುತ್ತಿದ್ದಾಗ ಶಿರೂರಿನ ಟೋಲ್‌ಗೇಟಿನ ಕಂಬಕ್ಕೆ ಢಿಕ್ಕಿ ಹೊಡೆದು ಆಯಂಬುಲೆನ್ಸ್ ಪಲ್ಟಿಯಾಗಿ, ಅದರೊಳಗಿದ್ದವರು ರಸ್ತೆಗೆ ಎಸೆಯಲ್ಪಟ್ಟು, ರೋಗಿ ಸಹಿತ ನಾಲ್ವರು ಸಾವನ್ನಪ್ಪಿದ್ದರು. ಮೃತಪಟ್ಟವರೆಲ್ಲರೂ ಹೊನ್ನಾವರ ನಿವಾಸಿಗಳಾಗಿದ್ದರು.
ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಗೀತಾ, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಗಣೇಶ್, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಶಾಂಕ್, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಟೋಲ್ ಸಿಬಂದಿ ಸಂಬಾಜೆ ಘೋರ್ಪಡೆ ಚೇತರಿಸಿಕೊಳ್ಳುತ್ತಿದ್ದಾರೆ.
ಚಾಲಕನ ಮೇಲೆ ಕೇಸು :
ಅಪಘಾತಕ್ಕೆ ಸಂಬಂಧಿಸಿದಂತೆ ಟೋಲ್ ಸಿಬಂದಿ ದೀಪಕ್ ಶೆಟ್ಟಿ ಎನ್ನುವವರು ನೀಡಿದ ದೂರಿನಂತೆ ಆಯಂಬುಲೆನ್ಸ್ ಚಾಲಕ ರೋಶನ್ ರೋಡ್ರಿಗಸ್ ವಿರುದ್ಧ ಕೇಸು ದಾಖಲಾಗಿದೆ. ಚಾಲಕನ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅವಘಢ ಸಂಭವಿಸಿದ್ದು, ಅದರಂತೆ ಬೈಂದೂರು ಠಾಣೆಯಲ್ಲಿ ಸೆಕ್ಷನ್ 279, 338, 304 ರಡಿ ಪ್ರಕರಣ ದಾಖಲಾಗಿದೆ.
ಟೋಲ್ ಸಿಬಂದಿ ನಿರ್ಲಕ್ಷ್ಯವೂ ಕಾರಣವಾಯಿತೇ? :
ನಾಲ್ವರ ಸಾವಿಗೆ ಕಾರಣವಾದ ಆಯಂಬುಲೆನ್ಸ್ ದುರಂತಕ್ಕೆ ಮೇಲ್ನೋಟಕ್ಕೆ ಚಾಲಕನ ವೇಗದ ಚಾಲನೆ ಕಾರಣ ಎನ್ನಲಾಗಿದ್ದರೂ, ಟೋಲ್‌ಗೇಟ್‌ನ ಸಿಬಂದಿಯ ನಿರ್ಲಕ್ಷ್ಯವೂ ಕಾರಣವಾಯಿತೇ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಟೋಲ್‌ಗೇಟ್‌ನ ತುರ್ತು ನಿರ್ಗಮನ (ಆಯಂಬುಲೆನ್ಸ್, ಗಣ್ಯರ ವಾಹನ ತೆರಳಲು ಇರುವ ಗೇಟು) ಗೇಟಿನ ಟ್ರ್ಯಾಕ್‌ನಲ್ಲಿ ದನವೊಂದು ಮಲಗಿತ್ತು. ಇದಲ್ಲದೆ ತುರ್ತು ನಿರ್ಗಮನ ಗೇಟ್‌ನಲ್ಲಿ ಎರಡೆರಡು ಕಡೆಗಳಲ್ಲಿ ಬ್ಯಾರಿಕೇಡ್ ಇಟ್ಟಿರುವುದು ಯಾಕೆ? ಸುಮಾರು 500 ಮೀ. ದೂರದವರೆಗೆ ಆಯಂಬುಲೆನ್ಸ್ ಸೈರನ್ ಶಬ್ದ ಕೇಳುವುದು ಸಾಮಾನ್ಯವಾಗಿದ್ದರೂ, ಆಯಂಬುಲೆನ್ಸ್ ಅಷ್ಟೊಂದು ಹತ್ತಿರ ಬರುವವರೆಗೆ ಕಾದದ್ದು ಯಾಕೆ? ಎನ್ನುವ ಪ್ರಶ್ನೆಗಳೆಲ್ಲ ಸಾರ್ವಜನಿಕರು ಕೇಳುತ್ತಿದ್ದಾರೆ.
ಎಬಿಎಸ್ ಬ್ರೇಕ್ ಇರಲಿಲ್ಲವೇ?:
ಚಾಲಕ ಬ್ರೇಕ್ ಹಾಕಿದ್ದ ನಿಯಂತ್ರಣಕ್ಕೆ ಸಿಗದ ಕಾರಣ ಹ್ಯಾಂಡ್ ಬ್ರೇಕ್ ಹಾಕಿದ್ದ. ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಂತ ಕಾರಣ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. 3 ವರ್ಷ ಹಿಂದಿನ ಟಾಟಾ ವಿಂಗರ್ ಆಯಂಬುಲೆನ್ಸ್ ಇದಾಗಿದ್ದು, ಎಬಿಎಸ್ ಬ್ರೇಕ್ ಇರಬೇಕು. ಬಿಎಎಸ್ -4 ವಾಹನಗಳಲ್ಲಿ ಎಬಿಎಸ್ ಬ್ರೇಕ್ ಇರುತ್ತದೆ. ಅದು ವಾಹನವನ್ನು ನಿಯಂತ್ರಣಕ್ಕೆ ತರುತ್ತದೆ. ಆದರೆ ಇಲ್ಲಿ ಆಯಂಬುಲೆನ್ಸ್ ವಾಹನ ಬ್ರೇಕ್ ಒತ್ತಿದಾಗ ನಿಲ್ಲದೆ, ಪಲ್ಟಿಯಾಗಿದೆ. ಹಾಗಾಗಿ ಎಬಿಎಸ್ ಬ್ರೇಕ್ ಇರಲಿಲ್ಲವೇ? ಎನ್ನುವ ಪ್ರಶ್ನೆ ಉದ್ಭವಿಸಿದೆ.