ಆತ್ಮಹತ್ಯೆಗೆ ಶರಣಾದ ಸ್ಟಾಫ್ ನರ್ಸ್; ಡೆತ್ ನೋಟ್ನಲ್ಲಿತ್ತು ಸಾವಿಗೆ ಕಾರಣ

ಬೆಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ಸ್ಟಾಫ್ ನರ್ಸ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಿತ್ರಾ (32 ವರ್ಷ) ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
32 ವರ್ಷ ವಯಸ್ಸಿನ ಸುಮಿತ್ರಾಗೆ ಇನ್ನು ಮದುವೆಯಾಗಿರಲಿಲ್ಲ. ಈ ವಿಚಾರವಾಗಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಕುಟುಂಬಸ್ಥರೊಂದಿಗೆ ವಾಸವಿದ್ದ ಸುಮಿತ್ರಾ ಮುಂಜಾನೆ ಕೆಲಸಕ್ಕೆ ತೆರಳಬೇಕಾದವರು ಎದ್ದಿರಲಿಲ್ಲ. ಕುಟುಂಬಸ್ಥರು ಕೋಣೆಯ ಬಾಗಿಲು ತಟ್ಟಿದರೂ ಸಹ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ಮುರಿದು ನೋಡಿದಾಗ ಸುಮಿತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆ ಗಿರಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದ್ದು, ನನ್ನ ಸಾವಿಗೆ ನಾನೇ ಕಾರಣ. ನನ್ನನ್ನು ಖುಷಿಯಾಗಿ ಕಳುಹಿಸಿಕೊಡಿ ಎಂದು ಬರೆಯಲಾಗಿದೆ. ಇನ್ನೂ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.