ಮತ್ತೊಂದು ಹೊಸ ಬಾಂಬ್ ಅತೃಪ್ತ ಶಾಸಕರ ಮುಂಬೈ ಸೀಕ್ರೆಟ್ ಬಿಚ್ಚಿಟ್ಟ ನವ್ಯಶ್ರೀ: ಕಾಂಗ್ರೆಸ್’ನಲ್ಲಿ ತಳಮಳ

ಬೆಳಗಾವಿ : ಅತೃಪ್ತ ಶಾಸಕರು ಮುಂಬೈನಲ್ಲಿದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ನಾಯಕರೊಬ್ಬರಿಗೆ ಅರ್ಧರಾತ್ರಿಯಲ್ಲಿ ಅತೃಪ್ತ ಶಾಸಕರ ಬಗ್ಗೆ ಮಾಹಿತಿ ಕೊಡ್ತಿದ್ದೆ ಎಂದು ನವ್ಯಶ್ರೀ ಆರ್. ರಾವ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತೃಪ್ತ ಶಾಸಕರು ಮುಂಬೈನಲ್ಲಿ ಇದ್ದಾಗ ನಾನೂ ಮುಂಬೈಗೆ ತೆರಳಿದ್ದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ನನಗೆ ಮುಂಬೈಗೆ ಹೋಗಲು ಸೀಕ್ರೆಟ್ ಟಾಸ್ಕ್ ನೀಡಿದ್ದರು.
ಅದು ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಸೀಕ್ರೆಟ್ ಟಾಸ್ಕ್ ಆಗಿತ್ತು. ಅದಕ್ಕಾಗಿ ಬೇರೆ-ಬೇರೆ ಫ್ಲೈಟ್‌ಗಳಿಂದ ಮುಂಬೈಗೆ ಹೋಗಿದ್ದೆ ಎಂದು ಹೇಳಿದ್ದಾರೆ. ನಾನು ಮುಂಬೈನ ಸುಫಿಯೋಟೆಲ್ ಹೋಟೆಲ್‌ನಲ್ಲಿ ತಂಗಿದ್ದೆ. ನನ್ನ ಜೊತೆ ಮೂವರು ಮಹಿಳೆಯರು ಬಂದಿದ್ದರು. ಹೋಟೆಲ್‌ಗೆ ಹೋಗಿ ಶಾಸಕರ ಚಲನವಲನ ನೋಡಿಕೊಳ್ಳುತ್ತಿದ್ದೆ. ನಂತರ ಕಾಂಗ್ರೆಸ್ ನಾಯಕರಿಗೆ ಅರ್ಧರಾತ್ರಿ ವಾಟ್ಸಪ್ ಮೂಲಕ ಅತೃಪ್ತ ಶಾಸಕರ ಮಾಹಿತಿ ಕೊಡ್ತಿದ್ದೆ. ಆ ಸೀಕ್ರೆಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಮುಂಬೈ ರಹಸ್ಯ ಬಿಚ್ಚಿಟ್ಟಿದ್ದಾರೆ.
ತೋಟಗಾರಿಕೆ ಇಲಾಖೆ ನಿರ್ದೇಶಕ ರಾಜಕುಮಾರ ಟಾಕಳೆ ನನ್ನನ್ನು ಕಿಡ್ನಾಪ್ ಮಾಡಿ ರೌಡಿಗಳ ಸರ್ಪಗಾವಲಿನೊಂದಿಗೆ ಗಣೇಶಪುರದ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ ಎಂದು ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಆರ್.ರಾವ್ ಆರೋಪಿಸಿದ್ದಾರೆ. ರಾಜಕುಮಾರ ಟಾಕಳೆ ಅವರು ನೀಡಿರುವ ದೂರಿನ ವಿಚಾರವಾಗಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆಯೇ ನನ್ನನ್ನು ಕಿಡ್ನಾಪ್ ಮಾಡಿ ಮಾವಿನ ತೋಪಿನಲ್ಲಿ ಕೂಡಿಹಾಕಿದ್ದ. ನನ್ನಿಂದ ಬಲವಂತವಾಗಿ ಹೇಳಿಕೆ ಪಡೆದು, ಅದನ್ನೂ ಮಾರಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಟಾಕಳೆ ವಿರುದ್ಧ ನಾನು ಸಿಇಎನ್ ಠಾಣೆಯಲ್ಲಿ ದೂರು ನೀಡುತ್ತಿದ್ದೇನೆ. ಮದುವೆಯಾಗಿ ಪತ್ನಿಯಿದ್ದರೂ ಮೋಸದಿಂದ ಮದುವೆಯಾಗಿರು ವುದಕ್ಕಾಗಿ ವಂಚನೆ ಪ್ರಕರಣ, ಮಾವಿನ ತೋಪಿನಲ್ಲಿ ಕೂಡಿಹಾಕಿ ಬಲವಂತದಿಂದ ಹೇಳಿಕೆ ಪಡೆದಿದ್ದಕ್ಕಾಗಿ ಕಿಡ್ನಾಪ್ ಪ್ರಕರಣ, ನನ್ನ ಚಾರಿತ್ರ್ಯ ಹರಣ ಮಾಡಲು ಅಶ್ಲೀಲ ವೀಡಿಯೋಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ವೆಬ್‌ಸೈಟ್‌ಗಳಿಗೆ ಮಾರಿಕೊಂಡಿದ್ದಕ್ಕಾಗಿ ಸೈಬರ್ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಲಿದ್ದೇನೆ. ಮುಖ್ಯವಾಗಿ ನನ್ನನ್ನು ಹನಿಟ್ರ್ಯಾಪ್ ಮಾಡಿ, ಹಣ ಪೀಕಿದಕ್ಕಾಗಿ ಹನಿಟ್ರ್ಯಾಪ್ ಪ್ರಕರಣದ ಅಡಿಯಲ್ಲೂ ದೂರು ದಾಖಲಿಸಲಿದ್ದೇನೆ ಎಂದು ಎಚ್ಚರಿಕೆ ನೀಡಿದ್ದಾರೆ.