ಬಿಜೆಪಿ, ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಸಿ.ಎಂ.ಇಬ್ರಾಹಿಂ

ಕುಷ್ಟಗಿ: ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ಹಸನಸಾಬ್, ದೊಡ್ಡನಗೌಡ ಪಾಟೀಲ, ಇಕ್ಬಾಲ್ ಅನ್ಸಾರಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅನೇಕ ಪ್ರಮುಖರು ಜೆಡಿಎಸ್ ಸೇರುವ ವಿಚಾರ ಮುನ್ನೆಲೆಯಲ್ಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಎಲ್ಲರನ್ನೂ ಸ್ವಾಗತಿಸುತ್ತೇವೆ. ನಾವಷ್ಟೇ ಅವರನ್ನು ಆಹ್ವಾನಿಸಿಲ್ಲ. ಜೆಡಿಎಸ್ ಸೇರ್ಪಡೆ ಅಪೇಕ್ಷೆ ಅವರಿಂದಲೂ ವ್ಯಕ್ತವಾಗಿದೆ. ಆದರೆ ಈ ವಿಷಯ ಇನ್ನೂ ಚರ್ಚೆ ಹಂತದಲ್ಲಿದ್ದು ಊಹಾಪೋಹವಂತೂ ಅಲ್ಲ. ಈಗಷ್ಟೇ ‘ನಿಶ್ಚಿತಾರ್ಥ’ ನಡೆಯುತ್ತಿದೆ ಎಂದು ಹೇಳಿದರು.
ಕುಷ್ಟಗಿಯ ಕ್ಷೇತ್ರದಲ್ಲಿ ‘ಅಲ್ಪಸಂಖ್ಯಾತರು-ಕುರುಬರು ಅಥವಾ ಲಿಂಗಾಯತರು-ಅಲ್ಪಸಂಖ್ಯಾತರು ಕೂಡಿದರೆ ಪಕ್ಷಕ್ಕೆ ಉತ್ತಮ ನೆಲೆ ನಿಶ್ಚಿತ. ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್‌ದಿಂದ ಸ್ಪರ್ಧೆಗಿಳಿಯಲು ಅನೇಕರು ಆಕಾಂಕ್ಷಿಗಳಾಗಿದ್ದು, ಬೇರೆ ಪಕ್ಷಗಳಿಂದ ಸೇರ್ಪಡೆಗೊಂಡ ಪ್ರಮುಖರಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಸ್ಥಳೀಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧರಿಸಲಾಗುತ್ತದೆ. ಯಾರನ್ನೂ ಕೈಬಿಡುವುದಿಲ್ಲ ಎಂದು ಹೇಳಿದರು.
ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ಜತೆಗೆ ಕರ್ನಾಟಕದ ವಿಧಾನಸಭೆಗೂ ನವೆಂಬರ್‌ದಲ್ಲಿ ಚುನಾವಣೆ ನಡೆಸುವ ಇಚ್ಛೆ ಬಿಜೆಪಿಯದ್ದಾಗಿದ್ದು, ಅದಕ್ಕಾಗಿಯೇ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಂಪುಟ ವಿಸ್ತರಣೆಗೆ ಹೈಕಮಾಡ್ ಗ್ರೀನ್‌ಸಿಗ್ನಲ್ ತೋರಿಸಿಲ್ಲ ಎಂದು ಹೇಳಿದರು.
ಜೆಡಿಎಸ್‌ಗೆ ರಾಜ್ಯದಲ್ಲಿ ಅಸ್ತಿತ್ವವೇ ಇಲ್ಲ ಎನ್ನಲಾಗುತ್ತಿತ್ತು. ಪಕ್ಷದ ತಳಹದಿ ಗಟ್ಟಿಯಾಗಿದ್ದು ಮತದಾರರನ್ನು ಜಾಗೃತಗೊಳಿಸುವ ಕೆಲಸ ಆರಂಭಿಸಿದ್ದೇವೆ. ಹಳೆಯ ಮೈಸೂರು ಭಾಗದಲ್ಲಿ ಪಕ್ಷ ಶಕ್ತಿಯುತವಾಗಿದೆ. ಮುಂಬೈ ಮತ್ತು ಕಲ್ಯಾಣ ಕರ್ನಾಟಕ ಪ್ರಾಂತ್ಯದಲ್ಲಿ ಪಕ್ಷದ ಬಲವರ್ಧನೆ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿರುವುದಾಗಿ ಹೇಳಿದರು.
ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಿದ ಆ ಪಕ್ಷದವರಿಗೇ ಕಾಂಗ್ರೆಸ್ ಮಣೆಹಾಕುತ್ತಿರುವುದರಿಂದ ಭ್ರಮನಿರಸನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‌ನತ್ತ ವಾಲಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಕಾಂಗ್ರೆಸ್ ಮುಕ್ತವಾಗಲಿದೆ. ಓಟ್ ಬ್ಯಾಂಕ್ ಎಂದೆ ಪರಿಗಣಿಸಲಾಗುತ್ತಿದ್ದ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಆ ಪಕ್ಷವನ್ನು ಈಗಾಗಲೇ ತ್ಯಜಿಸಿದ್ದಾರೆ ಎಂದರು.
ಸಿದ್ದು ತಬ್ಬಲಿ ಮಗ: ಬಿ.ಎಸ್.ಯಡಿಯೂರಪ್ಪ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದು ತ್ಯಾಗ ಅಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶೇಕಡ 90ರಷ್ಟು ಲಿಂಗಾಯತರೇ ಕಾರಣ. ಆದರೆ ಪಕ್ಷದಿಂದ ಮೂಲೆಗುಂಪಾದ ಯಡಿಯೂರಪ್ಪನವರಿಗೆ ಎಂಥ ಪರಿಸ್ಥಿತಿ ಬಂತು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರದು ಒಂದು ರೀತಿಯಲ್ಲಿ ತಬ್ಬಲಿ ಮಗನ ಪರಿಸ್ಥಿತಿಯಂತಾಗಿದೆ. ಕ್ಷೇತ್ರ ಇಲ್ಲದಿದ್ದಾಗ ಬದಾಮಿಗೆ ಕರೆತಂದು ನಿಲ್ಲಿಸಿ ಗೆಲ್ಲಿಸಿದೆವು. ಆದರೆ ನಂತರ ದಾರಿ ತಪ್ಪಿದರು. ಸಿದ್ದರಾಮಯ್ಯ ಅಂಥವರು ಸದನದಲ್ಲಿ ಇರಬೇಕು. ಆದರೆ ದುರ್ದೈವ ಅವರನ್ನು ಸೋಲಿಸಲು ಆ ಪಕ್ಷದವರೇ ಖೆಡ್ಡಾ ರೆಡಿ ಮಾಡಿದ್ದಾರೆ. ಹಾಗಾಗಿ ಅವರ ಬಗ್ಗೆ ಅನುಕಂಪ ಉಂಟಾಗುತ್ತದೆ ಎಂದು ವ್ಯಂಗ್ಯವಾಡಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ.ಹಿರೇಮಠ, ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ, ಪ್ರಮುಖರಾದ ಮಹಾಂತಯ್ಯನಮಠ, ಸಿದ್ದು ಬಂಡಿ, ತಾಲ್ಲೂಕು ಅಧ್ಯಕ್ಷ ಬಸವರಾಜ ನಾಯಕ ಇದ್ದರು.