ವೇಶ್ಯಾವಾಟಿಕೆ ಆರೋಪ; ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ದಾಳಿ; 73 ಜನರ ಬಂಧನ 6 ಮಕ್ಕಳ ರಕ್ಷಣೆ

ಗುವಾಹಟಿ: ಮೇಘಾಲಯದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬರ್ನಾರ್ಡ್ ಎನ್.ಮರಾಕ್ ಅಲಿಯಾಸ್ ರಿಂಪು ವಿರುದ್ಧ ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ಆರೋಪ ಕೇಳಿಬಂದಿದ್ದು, ಟುರಾ ಬಳಿಯ ರೆಸಾರ್ಟ್ ಮೇಲೆ ದಾಳಿ ನಡೆಸಿರುವ ಮೆಘಾಲಯ ಪೊಲೀಸರು 6 ಮಕ್ಕಳನ್ನು ರಕ್ಷಿಸಿದ್ದು, 73 ಜನರನ್ನು ಬಂಧಿಸಿದ್ದಾರೆ.
ವೆಸ್ಟ್ ಗಾರೊ ಹಿಲ್ ಜಿಲ್ಲೆಯ ಟುರಾ ಬಳಿ ಬರ್ನಾರ್ಡ್ ಮರಾಕ್ ಗೆ ಸೇರಿದ್ದ ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಕೊಳಕಾದ ಒಂದು ಕೊಠದಯಲ್ಲಿ 6 ಮಕ್ಕಳು ಪತ್ತೆಯಾಗಿದ್ದಾರೆ. ರೆಸಾರ್ಟ್ ದಾಳಿಯಲ್ಲಿ ಈವರೆಗೆ 73 ಜನರನ್ನು ಬಂಧಿಸಲಾಗಿದೆ.
ಬಿಜೆಪಿ ನಾಯಕ ಬರ್ನಾರ್ಡ್ ಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಆತ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ರಕ್ಷಿಸಲ್ಪಟ್ಟ ಮಕ್ಕಳು ಆಘಾತದಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿಯೂ ಇಲ್ಲ. ದಾಳಿ ನಡೆಸಿದ ಸ್ಥಳದಲ್ಲಿ ಸಿಕ್ಕ ವಸ್ತುಗಳು, ಅಲ್ಲಿದ್ದವರು ನೀಡಿದ ಮಾಹಿತಿ ಪ್ರಕಾರ ಬರ್ನಾರ್ಡ್ ಈ ಸ್ಥಳವನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರೆಸಾರ್ಟ್ ಮೇಲೆ ಪೊಲೀಸ್ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಬರ್ನಾರ್ಡ್, ನಾನೇನೂ ನಾಪತ್ತೆಯಾಗಿಲ್ಲ, ಇದು ಮುಖ್ಯಮಂತ್ರಿ ಕಾನ್ ರಾಡ್ ಸಂಗ್ಮಾ ಅವರು ನಡೆಸುತ್ತಿರುವ ದ್ವೇಷದ ರಾಜಕಾರಣ. ಅವರು ಪೊಲೀಸ್ ಇಲಾಖೆ ದುರುಪಯೋಗಪಡಿಸಿಕೊಂಡು ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದಾರೆ. ನಾನು ಕೆಲ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದೇನೆ. ಪೊಲೀಸರು ಆ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಾರೂ ಯಾವ ತಪ್ಪು ಮಾಡಿದವರಲ್ಲ ಎಂದಿದ್ದಾರೆ.
ಅಲ್ಲದೇ ಹೋಂಸ್ಟೇಯನ್ನು ವೇಶ್ಯಾಗೃಹ ಎಂದು ಪಟ್ಟ ಕಟ್ಟಲಾಗದು. ಪಾರ್ಟಿ ಮಾಡುತ್ತಿದ್ದ ಪ್ರೌಢ ವಯಸ್ಕ ಮಹಿಳೆಯನ್ನು ವೇಶ್ಯೆ ಎಂದು ಹೇಳಲು ಆಗಲ್ಲ ಇದು ಮುಖ್ಯಮಂತ್ರಿಗಳು ನನ್ನ ಮತದಾರರಿಗೆ ಕಳಂಕ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.