ಮುಂಬರುವ ಚುನಾವಣೆಯಲ್ಲಿ ಹೊಸಬರಿಗೆ ಚಾನ್ಸ್, ಬಿಜೆಪಿ ಶಾಸಕರಿಗೆ ಶುರುವಾಗಿದೆ ಆತಂಕ

ಬೆಂಗಳೂರು,ಜು.25- ಕರ್ನಾಟಕದಲ್ಲಿ ಮುಂದಿನ ವರ್ಷ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಹೊಸ ಮುಖಗಳಿಗೆ ಆದ್ಯತೆ ನೀಡಲು ಕೇಂದ್ರ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದು, ರಾಜ್ಯ ಬಿಜೆಪಿ ಶಾಸಕರಿಗೆ ಅದಾಗಲೇ ಆತಂಕ ಶುರುವಾಗಿದೆ.
ಉತ್ತರ ಪ್ರದೇಶದಲ್ಲಿ ಹೊಸ ನಾಯಕರಿಗೆ ಮನ್ನಣೆ ನೀಡಿದ ರೀತಿಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 40ರಿಂದ 50 ಕ್ಷೇತ್ರಗಳಲ್ಲಿ ಹೊಸಬರಿಗೆ ಆದ್ಯತೆ ನೀಡಲಿದ್ದು, ಒಂದು ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದ ನಾಯಕರಿಗೆ ಹೊಸ ಕ್ಷೇತ್ರ ಆಯ್ಕೆಗೆ ಸೂಚನೆ ನೀಡಲು ಚಿಂತನೆ ನಡೆದಿದೆ.
ಉತ್ತರಪ್ರದೇಶದಲ್ಲಿ ಬಿಜೆಪಿ ಹೊಸ ಕಾರ್ಯತಂತ್ರ ರೂಪಿಸಿತ್ತು. 60ಕ್ಕೂ ಹೆಚ್ಚು ಹೊಸ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಉಳಿದ ಸ್ಥಾನಗಳಿಂದಲೇ ಬಿಜೆಪಿ ಬಹುಮತ ಗಳಿಸಬೇಕು ಎಂದು ಹಳೇ ಮುಖಗಳಿಗೆ ಮನ್ನಣೆ ನೀಡಲಾಗಿತ್ತು.
ಈಗ ಇದೇ ಮಾದರಿಯನ್ನು ಕರ್ನಾಟಕದಲ್ಲೂ ಪ್ರಯೋಗ ಮಾಡಲು ಬಿಜೆಪಿ ವರಿಷ್ಠರು ಚಿಂತನೆ ನಡಸಿದ್ದಾರೆ. ಇದು ಬಿಜೆಪಿ ಹಿರಿಯ ಜೀವಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.ಬಿಜೆಪಿಯಲ್ಲಿ ಅನೇಕರು ಹಲವು ಬಾರಿ ಗೆದ್ದು ಶಾಸಕರಾಗಿದ್ದಾರೆ. ಹೀಗೆ 70 ವಯಸ್ಸು ದಾಟಿದಂತಹ ನಾಯಕರಿಗೆ 2023ರ ಚುನಾವಣೆಯಲ್ಲಿ ಪುನಃ ಟಿಕೆಟ್ ಕೊಡುವುದು ಕಷ್ಟ ಎಂದು ಹೇಳಲಾಗುತ್ತದೆ.
ಹೀಗಾಗಿ ಹಿರಿಯ ಶಾಸಕರಿಗೆ ಕೊಕ್ ನೀಡಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ. ವಯಸ್ಸಾದ ನಾಯಕರಿಗೆ ಟಿಕೆಟ್ ಕೊಡುವ ಬದಲು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಬಿಜೆಪಿ ವರಿಷ್ಠರು ತಂತ್ರ ರೂಪಿಸಿದ್ದಾರೆ.
ಇದು ಅದಾಗಲೇ ಬಿಜೆಪಿ ನಾಯಕರಲ್ಲಿ ತಳಮಳ ಸೃಷ್ಟಿಸಿದೆ. ಹೊಸಬರ ಆಯ್ಕೆಗೆ ಆದ್ಯತೆ ಕೊಡುವ ಮೂಲಕ ಪಕ್ಷ ಸಂಘಟನೆ ಹಾಗೂ ಗೆಲುವಿನ ಬಗ್ಗೆ ಬಿಜೆಪಿ ಹೊಸ ಕಾರ್ಯತಂತ್ರ ರೂಪಿಸಿದೆ.ಬಿಜೆಪಿ ಪಕ್ಷ ಪ್ರತಿನಿಸಿ ಒಂದೇ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿರುವ ಶಾಸಕರು ತಮ್ಮ ಕ್ಷೇತ್ರವನ್ನು ಹೊಸಬರಿಗೆ ಬಿಟ್ಟು ಕೊಡಬೇಕು. ಜತೆಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬ ಷರತ್ತು ವಿಸಲಾಗುತ್ತಿದೆ.
ಒಂದು ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದವರು ಅದೇ ಕ್ಷೇತ್ರದಲ್ಲಿ ಸ್ರ್ಪಸುವಂತಿಲ್ಲ. ಸ್ರ್ಪಸಲೇಬೇಕು ಎನ್ನುವ ಅನಿವಾರ್ಯತೆ ಬಿದ್ದರೆ, ಅವರಿಗೆ ಪಕ್ಕದ ಕ್ಷೇತ್ರ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಅದೂ ಕಡ್ಡಾಯವಾಗಿ ಗೆಲ್ಲಲೇಬೇಕು ಎಂಬ ಷರತ್ತು ವಿಸಿ ನೀಡಲಾಗುತ್ತದೆ.
ಮೂರು ಬಾರಿ ಗೆದ್ದು ಶಾಸಕರಾಗಿ ಸಚಿವರಾಗಿ ಕೆಲಸ ಮಾಡಿದವರು ಹೊಸಬರಿಗೆ ಆದ್ಯತೆ ಕೊಟ್ಟು ಕ್ಷೇತ್ರ ಬಿಟ್ಟು ಕೊಡಬೇಕು. ಪಕ್ಕದ ಕ್ಷೇತ್ರದಲ್ಲಿ ನಿಂತು ಗೆಲ್ಲಬೇಕು. ಬಿಜೆಪಿಯ ಈ ಕಾರ್ಯತಂತ್ರ ಬಿಜೆಪಿಯ ಹಿರಿಯ ತಲೆಗಳಲ್ಲಿ ಆತಂಕ ಸೃಷ್ಟಿಸಿದೆ.
ದಶಕಗಳಿಂದ ಗೆದ್ದು ಬಂದ ಕ್ಷೇತ್ರ ಬಿಟ್ಟು ನಿಜವಾಗಿಯೂ ಪಕ್ಕದ ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವೇ ಎಂಬ ಪ್ರಶ್ನೆ ಹಿರಿಯರನ್ನು ಕಾಡುತ್ತಿದೆ. ಬಿಜೆಪಿಯ ಈ ರಣ ತಂತ್ರ ಹಿರಿಯ ಶಾಸಕರಲ್ಲಿ ಆತಂಕ ಸೃಷ್ಟಿಸಿದೆ.ಬಿಜೆಪಿ ಪಕ್ಷವನ್ನು ದಶಕಗಳಿಂದ ಸಂಘಟನೆ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.ಅದರಲ್ಲೂ ಯುವ ಮುಖಗಳಿಗೆ ಮಣೆ ಹಾಕಲಾಗುತ್ತಿದೆ. ಒಂದು ವೇಳೆ ಹೊಸಬರು ಸೋತರೂ, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಸಿ ಭವಿಷ್ಯದ ಭದ್ರ ಬುನಾದಿ ಹಾಕಲು ಬಿಜೆಪಿ ವರಿಷ್ಠರು ಚಿಂತನೆ ಮಾಡಿದ್ದಾರೆ.
ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಬಹುಮತಕ್ಕೆ ಬೇಕಿರುವ ಸೀಟು ಕೇವಲ 113. ಹೊಸಬರಿಗೆ 40 ಸೀಟು ಕೊಟ್ಟರು, ಬಾಕಿ ಉಳಿದ 185 ಕ್ಷೇತ್ರಗಳಲ್ಲಿ ಹಾಲಿ ಶಾಸಕ, ಸಚಿವರನ್ನೇ ಕಣಕ್ಕೆ ಇಳಿಸಲಾಗುತ್ತದೆ.ಈ ಮೂಲಕ ಯುವಕರಿಗೆ ಮುಂದಿನ ಚುಣಾವಣೆಯಲ್ಲಿ ಆದ್ಯತೆ ಕೊಡಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಬಿಜೆಪಿಯ ಈ ರಣತಂತ್ರದಿಂದ ಹಿರಿಯ ಶಾಸಕರು ಗಾಬರಿಯಾಗಿದ್ದಾರೆ. ಅನ್ಯ ಕ್ಷೇತ್ರಗಳ ಪೈಕಿ ಸೂಕ್ತ ಕ್ಷೇತ್ರ ಹುಡುಕಾಟ ಪ್ರಾರಂಭ ಮಾಡಿದ್ದಾರೆ.