
ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದರ ವಿರುದ್ಧ ಕಾಂಗ್ರೆಸ್ ದೊಡ್ಡಮಟ್ಟದ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಡಿಕೆಶಿ, ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರ ಈ ಮುಂಚೆ ಏನು ಹೇಳಿತ್ತೋ ಅದೇ ರೀತಿ ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಈಶ್ವರಪ್ಪ ಅವರ ರಕ್ಷಣೆಗಾಗಿ ಸತ್ಯಾಂಶವನ್ನು ಮುಚ್ಚಿ ಹಾಕಿದ್ದಾರೆ. ಬಿ ರಿಪೋರ್ಟ್ ಕುರಿತು ಕಾನೂನು ತಜ್ಞರ ಜತೆಗೆ ಚರ್ಚಿಸಿದ್ದೇವೆ. ತನಿಖಾ ಹಂತದಲ್ಲಿ ಪೊಲೀಸರು ಲೋಪದೋಷ ಎಸಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಎಚ್ಚರಿಸಿದರು.
ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ಪರ್ಸೆಂಟೇಜ್ ಆರೋಪ ಮಾಡಿದ್ದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್ ಏಪ್ರಿಲ್ 12ರ ರಾತ್ರಿ ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಆಯಂಡ್ ಲಾಡ್ಜಿಂಗ್ನಲ್ಲಿ ರೂಂ ನಂಬರ್ 207ರಲ್ಲಿ ಆತ್ಮಹತ್ಯಗೆ ಶರಣಾಗಿದ್ದರು. ಸಾವಿಗೂ ಮುನ್ನ ಅಂದು ತಡರಾತ್ರಿ ಮಾಧ್ಯಮ ಪತ್ರಿನಿಧಿಗಳಿಗೆ ವಾಟ್ಸ್ಆಯಪ್ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಂದೇಶ ರವಾನಿಸಿದ್ದರು.
‘ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಕಾರಣ. ಸಚಿವರಿಗೆ ಶಿಕ್ಷೆಯಾಗಬೇಕು, ನನ್ನೆಲ್ಲಾ ಆಸೆಗಳನ್ನ ಬದಿಗೊತ್ತಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ-ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕು’ ಎಂದು ಉಲ್ಲೇಖಿಸಿದ್ದರು. ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಾರೀ ಕೋಲಾಹಲವನ್ನೇ ಎಬ್ಬಿಸಿತ್ತು. ಕೊನೆಗೆ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.