ಜಾರಕಿಹೊಳಿ ಸಿಡಿ ಪ್ರಕರಣ: ವರದಿ ಸಲ್ಲಿಸದಂತೆ ಹೈಕೋರ್ಟ್ ಆದೇಶ

ಬೆಂಗಳೂರು, ಜು.25: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ವರದಿ ಸಲ್ಲಿಸದಂತೆ ನೀಡಿರುವ ಮಧ್ಯಂತರ ಆದೇಶ, ಪ್ರಕರಣದ ಉಳಿದಿಬ್ಬರು ಆರೋಪಿಗಳಾದ ನರೇಶ್ ಗೌಡ ಮತ್ತು ಶ್ರವಣ್ ಕುಮಾರ್‌ಗೂ ಅನ್ವಯವಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ತಮ್ಮ ವಿರುದ್ಧದ ಎಫ್ ಐ ಆರ್ ರದ್ದು ಕೋರಿ ಆರೋಪಿಗಳಾದ ನರೇಶ್ ಗೌಡ, ಶ್ರವಣ್ ಕುಮಾರ್ ಅರ್ಜಿ ನ್ಯಾ, ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ನ್ಯಾಯಪೀಠ ಕೆಲ ಕಾಲ ವಾದ ಆಲಿಸಿದ ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿತು. ಅಲ್ಲದೆ, ಪ್ರಕರಣ ಸಂಬಂಧ ಯಾವುದೇ ವರದಿ ಸಲ್ಲಿಸಬಾರದು ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ, ಆದು ಈ ಆರೋಪಿಗಳಿಗೂ ಅನ್ವಯವಾಗಲಿದೆ ಏಕಸದಸ್ಯ ಪೀಠದಿಂದ ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.
ಲಿಖಿತ ವಾದ ಮಂಡನೆಗೆ ಸೂಚನೆ: ಈ ಮಧ್ಯೆ, ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯೂ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ವಾದದ ಲಿಖಿತ ಸಾರಾಂಶವನ್ನು ಸಲ್ಲಿಸಲು ಅರ್ಜಿದಾರರು ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿತು.
ಅಲ್ಲದೆ, ಪ್ರಕರಣದ ಅಂತಿಮ ವಿಚಾರಣೆ ಸೆ 5ಕ್ಕೆ ನಿಗದಿಪಡಿಸಿ ಅಷ್ಟರಲ್ಲಿ ಲಿಖಿತ ವಾದದ ಹೇಳಿಕೆಗಳನ್ನು ಸಲ್ಲಿಸುವಂತೆ ಆದೇಶಿಸಿತು.
ಅಮಿಕಸ್ ಕ್ಯೂರಿಯಾಗಿ ಸಂದೇಶ್ ಚೌಟ ನೇಮಕ: ಇದೇ ವೇಳೆ ನ್ಯಾಯಾಲಯ ಪ್ರಕರಣದಲ್ಲಿ ಕೋರ್ಟ್‌ಗೆ ಸಲಹೆ ನೀಡಲು ಅಮಿಕಸ್ ಕ್ಯೂರಿಯನ್ನಾಗಿ ಹಿರಿಯ ನ್ಯಾಯವಾದಿ ಸಂದೇಶ್ ಚೌಟ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತು. ಅವರಿಗೆ ಪ್ರಕರಣದ ಎಲ್ಲ ದಾಖಲೆಗಳನ್ನು ಒದಗಿಸಲು ನ್ಯಾಯಾಲಯ ರಿಜಿಸ್ಟ್ರಾರ್ ಜನರಲ್‌ಗೆ ಸೂಚನೆ ನೀಡಿತು.
ಏಕಸದಸ್ಯಪೀಠ ಏನು ಹೇಳಿತ್ತು?: ಕಳೆದ ಮಾ. 28ರಂದು ಹೈಕೋರ್ಟ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಗಳನ್ನು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪನೆಯಾಗಿರುವ ವಿಶೇಷ ನ್ಯಾಯಪೀಠಕ್ಕೆ ವರ್ಗಾಯಿಸಿತ್ತು. ಹಾಗಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಾರಕಿಹೊಳಿ ಜನಪ್ರತಿನಿಧಿ ಆಗಿರುವುದರಿಂದ ಮತ್ತು ಅವರ ಮೇಲೆಯೇ ನೇರ ಆರೋಪ ಇರುವುದರಿಂದ ವಿಶೇಷ ಕೋರ್ಟ್ ವಿಚಾರಣೆ ನಡೆಸುವುದು ಸೂಕ್ತವೆಂದು ಏಕಸದಸ್ಯಪೀಠ ಹೇಳಿದೆ.
ಸಿಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಆದೇಶ ಪ್ರಶ್ನಿಸಿ ಮತ್ತು ರಮೇಶ್ ಜಾರಕಿಹೊಳಿ ಕಬ್ಬನ್ ಪಾರ್ಕ್ ಠಾಣೆಗೆ ನೀಡಿದ್ದ ಬ್ಲಾಕ್‌ಮೇಲ್ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಎರಡು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು.
ಆಗ ಪ್ರಕರಣದ ವಿವರಗಳನ್ನು ಗಮನಿಸಿದ ನ್ಯಾಯಮೂರ್ತಿಗಳು, ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಲಿ ಶಾಸಕರಾಗಿದ್ದಾರೆ. ಹೈಕೋರ್ಟ್‌ನಲ್ಲಿ ಮಾಜಿ-ಹಾಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಪೀಠವಿದೆ. ಹಾಗಾಗಿ, ಆ ನ್ಯಾಯಪೀಠದ ಮುಂದೆ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಿ ಆದೇಶಿಸಲು ಕಡತವನ್ನು ಸಿಜೆ ಮುಂದೆ ಮಂಡಿಸುವಂತೆ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿದರು.
ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಎಸ್‌ಐಟಿ ರಚನೆ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯಲ್ಲಿ ಪ್ರಮುಖ ಕೋರಿಕೆಗಳಿವೆ. ಆ ಕುರಿತು ನಿಮ್ಮ ಪೀಠವೇ ವಾದ ಆಲಿಸಬೇಕೆಂದರು.
ಆದರೆ, ಜಡ್ಜ್, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣ ಆಲಿಸಲು ವಿಶೇಷ ಪೀಠ ರಚಿಸಿ ಈ ಹಿಂದೆಯೇ ಮುಖ್ಯ ನ್ಯಾಯಮೂರ್ತಿಗಳ ಆದೇಶ ಮಾಡಿದ್ದಾರೆ. ಹೀಗಾಗಿ, ನಾವು ಆ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಪಿಐಎಲ್ ವಿಲೇವಾರಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ಮಾ.10ರಂದು ವಿಲೇವಾರಿ ಮಾಡಿತ್ತು.
ಆದರೆ ಎಸ್ ಐ ಟಿ ರಚನೆ ಪ್ರಶ್ನಿಸಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಏಕಸದಸ್ಯಪೀಠಕ್ಕೆ ವರ್ಗಾಯಿಸಿದೆ.