RSS ಕಚೇರಿ ಮೇಲೆಯೇ ರಾಷ್ಟ್ರಧ್ವಜ ಹಾರಾಡಿದ್ದು ಕಂಡಿಲ್ಲ; ತಿರುಗೇಟು ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ರಾಜಕೀಯ ವಿಚಾರವಾಗಿ ನೋಡಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಹಿನ್ನೆಲೆಯಲ್ಲಿ ಅಮೃತ ಮಹೋತ್ಸದ ಅಂಗವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಆದರೆ ಆರ್ ಎಸ್ ಎಸ್ ಕಚೇರಿಗಳ ಮೇಲೆಯೇ ಇದುವರೆಗೂ ತಿರಂಗಾ ಹಾರಾಡಿದ್ದು ಕಂಡಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕಾಗಿನಿಂದ ಆರ್ ಎಸ್ ಎಸ್ ಕಚೇರಿಗಳ ಮೇಲೆಯೇ ಇದುವರೆಗೂ ಒಮ್ಮೆಯೂ ರಾಷ್ಟ್ರಧ್ವಜ ಹಾರಾಡಿದ್ದನ್ನು ನೋಡಿಲ್ಲ ಎಂದು ಹೇಳಿದರು.
ಹರ್ ಘರ್ ತಿರಂಗಾವನ್ನು ರಾಜಕೀಯ ಕಾರ್ಯಕ್ರಮ ಮಾಡಬಾರದು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ನಾವು ರಾಜಕೀಯವಾಗಿ ನೋಡಲು ಇಷ್ಟಪಡಲ್ಲ. ರಾಜಕಿಯೇತರವಾಗಿ ನಾನು ಇದನ್ನು ನೋಡಬಯಸುತ್ತೇನೆ ಎಂದರು.
ಇದೇ ವೇಳೆ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅಧಿಕಾರ ಸ್ವೀಕಾರ ವಿಚಾರವಾಗಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಒಬ್ಬ ಆದಿವಾಸಿ ಮಹಿಳೆ ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿರುವುದು ಅಭಿನಂದನಾರ್ಹ. ಬಲಿಷ್ಠ ಪ್ರಜಾಪ್ರಭುತ್ವ ದೇಶದ ರಾಷ್ಟ್ರಪತಿಯಾಗಿ ಅವರು ಆಯ್ಕೆಯಾಗಿರುವುದಕ್ಕೆ ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.