EducationKarnataka News
ಫೊಲೀಕ್ ಅಸೀಡ್ ಮಾತ್ರೆ ಸೇವನೆ ಮಾಡಿ ಅಸ್ವಸ್ಥರಾದ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ವಿದ್ಯಾರ್ಥಿಗಳು ಸವದತ್ತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು.

ಸವದತ್ತಿ – ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂದು ಶಾಲೆಯಲ್ಲಿ ಕೊಟ್ಟ ಫೊಲೀಕ್ ಅಸೀಡ್ ಮಾತ್ರೆ ಸೇವನೆ ಮಾಡಿದ ಕೆಲವು ಸಮಯದ ನಂತರ ಹಲವು ವಿದ್ಯಾರ್ಥಿಗಳಲ್ಲಿ ತಲೆ ನೋವು ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ.

ಆ ಮಾತ್ರೆಯನ್ನು ಸೇವಿಸಿದ ಸುಮಾರು 15 ವಿದ್ಯಾರ್ಥಿನಿಯರು ಹಾಗೂ 6 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 21 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಈ ಶಾಲೆಯಲ್ಲಿ 298 ವಿದ್ಯಾರ್ಥಿಗಳಿದ್ದು, ಅದರಲ್ಲಿ 241 ವಿದ್ಯಾರ್ಥಿಗಳು ಹಾಜರಿದ್ದರು. 239 ವಿದ್ಯಾರ್ಥಿಗಳು ಮಾತ್ರೆ ಸೇವಿಸಿದ್ದರು. ಅವರಲ್ಲಿ 21 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ಕೆಲವರಿಗೆ ಮಾತ್ರ ತಲೆ ನೋವು ಹೊಟ್ಟೆ ನೋವು ಕಂಡು ಬಂದಿದ್ದರಿಂದ ಸವದತ್ತಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಂಜೆ 5 ಗಂಟೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಪ್ರಸ್ತುತ ಆರೋಗ್ಯವಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ್ ಕರಿಕಟ್ಟಿಯವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಪಿಎಸ್ಐ ಶಿವಾನಂದಗುಡುಗನಟ್ಟಿ, ಪಿ ಐ ಕರುನೇಶ್ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.