ಬೆಳಗಾವಿಯ ವಡಗಾವಿಯ ಆರಾಧ್ಯದೇವತೆ ಪ್ರಸಿದ್ಧ ಶ್ರೀಮಂಗಾಯಿದೇವಿ ಜಾತ್ರೆ ಆರಂಭ

ಬೆಳಗಾವಿಯ ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಅದ್ಧೂರಿಯಾಗಿ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನೆರವೇರಲಿದೆ.
ವಡಗಾವಿಯ ಮಂಗಾಯಿದೇವಿ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗ್ರಾಮೀಣ ಸೊಗಡಿನ ಈ ಜಾತ್ರೆ ಸಾವಿರಾರು ಭಕ್ತರು ತನ್ನ ಆಕರ್ಷಿಸುತ್ತದೆ. ವಡಗಾವಿಯ ಮಂಗಾಯಿ ದೇವಸ್ಥಾನ ಆವರಣ ಭಕ್ತರಿಂದ ಕಿಕ್ಕಿರಿದು ತುಂಬಿ ಹೋಗಿತ್ತು. ಸ್ಥಳೀಯರು, ಗೋವಾ, ಮಹಾರಾಷ್ಟ್ರ ಮೊದಲಾದ ಕಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ನೂರಾರು ಮಂದಿ ದೇವಿಯ ಮಂದಿರದ ಮೇಲೆ ಕೋಳಿ ಮರಿಗಳನ್ನು ಎಸೆದು ಹರಕೆ ತೀರಿಸಿದ್ದು ವಿಶೇಷವಾಗಿತ್ತು. ಪ್ರತಿ ವರ್ಷವೂ ಮಾಸದಲ್ಲಿ ಹುಣ್ಣಿಮೆಯ ನಂತರ ಬರುವ ಮಂಗಳವಾರದಂದೇ ಈ ಜಾತ್ರೆ ನಡೆಯುತ್ತದೆ. ವಡಗಾವಿಯ ವಿಷ್ಣು ಗಲ್ಲಿ, ಪಾಟೀಲ ಗಲ್ಲಿ ಮೊದಲಾದ ಕಡೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಕೋಳಿ ಮರಿಗಳನ್ನು ಖರೀದಿಸಿದ ಭಕ್ತರು, ಅವುಗಳನ್ನು ಮಂದಿರದ ಮೇಲೆ ಎಸೆದು, ಹಾರಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಚಿಕ್ಕ ಮಕ್ಕಳು ಕೂಡ ಸಣ್ಣ ಕೋಳಿ ಮರಿಗಳನ್ನು ಹಾರಿಸಿದ್ದು ವಿಶೇಷವಾಗಿತ್ತು. ಹರಕೆ ಈಡೇರಿದ ಖುಷಿಯಲ್ಲಿ ಈ ಆಚರಣೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೆಲವು ಭಕ್ತರು ಕುರಿ ಬಲಿ ನೀಡುವುದಾಗಿಯೂ ಹರಕೆ ಹೊತ್ತುಕೊಳ್ಳುವುದು ಸಂಪ್ರದಾಯವಾಗಿದೆ.
ಇನ್ನು ಬೆಳಿಗ್ಗೆ 10 ಗಂಟೆಗೆ ಮಂಗಾಯಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ 12 ಗಂಟೆಗೆ ದೇವಿಗೆ ಎರಡನೇ ಆರತಿ ಬೆಳಗಿದರು. ಕ್ಷಣ ಕ್ಷಣಕ್ಕೂ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಮಾತನಾಡಿದ ಭಕ್ತರು ನಾವು ಬಹಳ ವರ್ಷದಿಂದ ಜಾತ್ರೆ ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ಜಾತ್ರೆ ಆಗಿರಲಿಲ್ಲ. ಈ ಬಾರಿ ಬಾಳ ಜೋರ ಜಾತ್ರೆ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಜಾತ್ರೆಯ ಸಂದರ್ಭದಲ್ಲಿ ಮಂಗಾಯಿ ದೇವಿಗೆ ಪೂಜೆ ಸಲ್ಲಿಸಿದರೆ, ಮಳೆ–ಬೆಳೆ ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ, ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಗೆ ಪೂಜೆ ನೆರವೇರಿಸಿದರು. ಜಾತ್ರಾ ಕಮೀಟಿಯವರು ಮಾತನಾಡಿ ಎರಡು ವರ್ಷಗಳಿಂದ ಸರಳವಾಗಿ ಜಾತ್ರೆ ಮಾಡಿದ್ದೇವು. ಈ ಬಾರಿ ಅದ್ಧೂರಿಯಾಗಿ ಜಾತ್ರೆ ಮಾಡುತ್ತಿದ್ದೇವೆ. ಮಂದಿರ ಕಮೀಟಿ, ಪಾಲಿಕೆ, ಶಾಹಪುರ ಪೊಲೀಸರ ಸಹಕಾರದೊಂದಿಗೆ ಜಾತ್ರೆ ಯಶಸ್ಸಿಗೆ ಶ್ರಮಿಸುತ್ತಿದ್ದೇವೆ. ಜಾತ್ರೆಗಾಗಿ ಒಂದು ತಿಂಗಳು ವಾರ ಪಾಲಿಸಿದ್ದೇವು. ಮಂಗಾಯಿ ಜಾತ್ರೆ ದಿನ ಮಳೆ ಆಗುವ ಪ್ರತೀತಿಯಿದೆ. ಅದೇ ರೀತಿ ಬಾರಿಯೂ ಮಳೆ ಆಗಿಯೇ ಆಗುತ್ತದೆ. ಎಲ್ಲರೂ ಬಂದು ಜಾತ್ರೆಯಲ್ಲಿ ಭಾಗಿಯಾಗಿ ಪುನೀತರಾಗಿ ಎಂದರು.
ಇನ್ನು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಇದೇ ವೇಳೆ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ ಅವರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಅದಕ್ಕೆ ಅನುಕೂಲಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಸಿಸಿಕ್ಯಾಮರಾ ಅಳವಡಿಸಿದ್ದೇವೆ, ಕೆಎಸ್‍ಆರ್‍ಪಿ ಬಟಾಲಿಯನ್ ಕೂಡ ನಿಯೋಜಿಸಿದ್ದೇವೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಒಟ್ಟಾರೆ ಐದು ದಿನಗಳ ಕಾಲ ನಡೆಯುವ ಈ ಅದ್ಧೂರಿ ಮಂಗಾಯಿ ದೇವಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರುವ ಸಾಧ್ಯತೆಯಿದ್ದು. ದೇವಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ನಾವು ಕೂಡ ಹಾರೈಸೋಣ.