ಬೆತ್ತಲೆಯಾಗಿ ಕ್ಯಾಮೆರಾ ಮುಂದೆ ಪೋಸ್ ನೀಡಿದ ನಟ ರಣವೀರ್ ಸಿಂಗ್ಗೆ ಎದುರಾಯ್ತು ಸಂಕಷ್ಟ!
ರಣವೀರ್ ಸಿಂಗ್ ವಿರುದ್ಧ FIR ದಾಖಲು ವಿವಿಧ ಸೆಕ್ಷನ್‌ಗಳಾದ 292, 293, 509 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ

ಮುಂಬೈ: ಬೆತ್ತಲೇ ಫೋಟೋಶೂಟ್ ಮಾಡಿಸುವ ಮೂಲಕ ಭಾರೀ ಟ್ರೋಲ್ ಆಗಿದ್ದಲ್ಲದೆ, ಸಿನಿ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿರುವ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ರಣವೀರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್ ಅಡಿಯಲ್ಲಿ ಮುಂಬೈನ ಚೆಂಬೂರ್ ಠಾಣಾ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.
ಪೂರ್ವ ಮುಂಬೈ ಉಪನಗರ ಮೂಲದ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಗಳು ಮತ್ತು ಮಹಿಳಾ ವಕೀಲರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದಾರೆ.
ರಣವೀರ್ ಅವರು ತಮ್ಮ ಬೆತ್ತಲೆ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಮಹಿಳೆಯರ ನಮ್ರತೆಗೆ ಅಪಮಾನ ಎಸಗಿದ್ದಾರೆ ಎಂದು ಎನ್‌ಜಿಒ ಪದಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ, ರಣವೀರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಅಂದಹಾಗೆ ರಣವೀರ್ ಅವರು ಮ್ಯಾಗಜಿನ್ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಣವೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ ಮತ್ತು ಪರ-ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ.
ಪತ್ನಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಟ ಅರ್ಜುನ್ ಕಪೂರ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರಣವೀರ್ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ಕೆಲವರು ರಣವೀರ್ ನಗ್ನ ಫೋಟೋಶೂಟ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.