Breaking: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ: ಸಿಎಂ ಬೊಮ್ಮಾಯಿ ಖಂಡನೆ

ಬೆಂಗಳೂರು, ಜು.27: ಮಂಗಳೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಮಂಗಳವಾರ ಮಧ್ಯರಾತ್ರಿ ಅವರು ಟ್ವೀಟ್ ಮಾಡಿದ್ದಾರೆ.
“ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ ಖಂಡನೀಯ.
ಇಂಥ ಹೇಯಕೃತ್ಯ ಎಸಗಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷಿಸಲಾಗುವುದು. ಪ್ರವೀಣ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಿಸಲಿ. ಓಂ ಶಾಂತಿಃ,” ಎಂದು ಟ್ವೀಟ್ ಮಾಡಿದ್ದಾರೆ.
“ಬಿಜೆಪಿ ಪಕ್ಷದ ಯುವ ಮುಖಂಡ, ಅಮಾಯಕ ಪ್ರವೀಣ್ ಬೆಳ್ಳಾರೆ ಮೇಲೆ ದಾಳಿ, ಕೊಲೆ ಕೃತ್ಯ ಖಂಡನೀಯ. ಇದನ್ನು ನೋಡಿ ಸರಕಾರ ಸುಮ್ಮನಿರಲು ಸಾಧ್ಯವಿಲ್ಲ. ಘಟನೆ ಬಗ್ಗೆ ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ, ಗೃಹ ಸಚಿವರಿಗೆ ವರದಿ ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಶೀಘ್ರ ತಂಡ ರಚಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕದಡುವ ದುಷ್ಕರ್ಮಿಗಳ ಮಟ್ಟಹಾಕುವ ಕೆಲಸವನ್ನು ಸರಕಾರ ಪ್ರಾಮಾಣಿಕವಾಗಿ ಮಾಡಲಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.ಪ್ರವೀಣ್ ಹತ್ಯೆ ವಿಚಾರದಲ್ಲಿ ಯಾರೂ ಉದ್ವೇಗಕ್ಕೊಳಗಾಗುವುದು ಬೇಡ. ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಶಾಂತಿ ಪ್ರಿಯರು. ಕೊಲೆ ವಿಚಾರದಲ್ಲಿ ಆರೋಪಿಗಳ ಮಟ್ಟಹಾಕುವ ಪ್ರಯತ್ನ ಶೀಘ್ರದಲ್ಲೇ ಆಗಲಿದೆ,” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಹೇಳಿಕೆ ನೀಡಿದ್ದರು.