ಬಿಜೆಪಿ ಯುವ ಮುಖಂಡನ ಹತ್ಯೆ, ಕೆಲವೆಡೆ 144 ಸೆಕ್ಷನ್ ಜಾರಿ, ಶಾಲೆಗಳಿಗೆ ರಜೆ

ಮಂಗಳೂರು, ಜುಲೈ 27: ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪುತ್ತೂರಿನ ಬೊಳುವಾರಿನಲ್ಲಿ ಸರಕಾರಿ ಬಸ್ ಮೇಲೆ ಕೆಲ ಯುವಕರು ಕಲ್ಲು ತೂರಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪುತ್ತೂರು ವಿಭಾಗದ ಸುಳ್ಯ, ಕಡಬ, ಪುತ್ತೂರು ತಾಲೂಕುಗಳಲ್ಲಿ 144 ಸೆಕ್ಸನ್ ಜಾರಿ ಮಾಡಲಾಗಿದೆ.
ಮಂಗಳವಾರ ರಾತ್ರಿ ಕೆಲವು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆ ಮಾಡಲಾಗಿದ್ದು, ಘಟನೆ ನಂತರ ಸುಳ್ಯ, ಕಡಬ ಹಾಗು ಪುತ್ತೂರು ತಾಲೂಕುಗಳಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಕ್ಷನ್ 144 ಜಾರಿ ಮಾಡಿ ಪುತ್ತೂರು ವಿಭಾಗಾಧಿಕಾರಿ ಗಿರೀಶ್ ನಂದನ್ ಆದೇಶ ಹೊರಡಿಸಿದ್ದಾರೆ. ಪುತ್ತೂರು, ಸುಳ್ಯ, ಕಡಬ ತಾಲೂಕಿನಾದ್ಯಂತ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಪುತ್ತೂರಿನ ಎರಡು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಡಬ, ಬೆಳ್ಳಾರೆ ಪೇಟೆಗಳು ಸಂಪೂರ್ಣ ಬಂದ್ ಮಾಡಲಾಗಿದ್ದು, ಕಡಬದಲ್ಲಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪ್ರವೀಣ್ ಹುಟ್ಟೂರಲ್ಲಿ ಬಿಲ್ಲವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಮರಣೋತ್ತರ ಪರೀಕ್ಷೆ ಮೂರ್ಣಗೊಂಡಿದ್ದು, ಪ್ರವೀಣ್ ಮೃತದೇಹವನ್ನು ಮೆರೆವಣಿಗೆ ಮೂಲಕ ಸಾಗಿಸಲು ಬಿಜೆಪಿ ಹಾಗೂ ಹಿಂದೂಪರ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ ಪುತ್ತೂರು ನಗರದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಟು ದರ್ಬೆ, ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ ಕೊಂಡೊಯ್ಯಲಾಗುತ್ತಿದೆ.
ಬಂದ್‌ಗೆ ಕರೆ
ಪ್ರವೀಣ್ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕು ಬಂದ್‌ಗೆ ಹಿಂದೂ ಪರ ಸಂಘಟನೆಗಳು ಕರೆ ನೀಡಿವೆ. ಸ್ವಯಂ ಪ್ರೇರಿತರಾಗಿ ಬಂದ್ ಮಾಡುವಂತೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪುತ್ತೂರಿನ ಅಂಬಿಕಾ ಕಾಲೇಜ್ ಹಾಗೂ ವಿವೇಕಾನಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಸುಳ್ಯ, ಕಡಬ ಬೆಳ್ಳಾರೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ತನಿಖೆಗೆ ವಿಶೇಷ ತಂಡ ರಚನೆ
ಪ್ರವೀಣ್ ಹತ್ಯೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಗಳ ಬಂಧನಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮಂಗಳವಾರ ರಾತ್ರಿ ಬೆಳ್ಳಾರೆಯಲ್ಲಿ ನಿಂತಿದ್ದ ವೇಳೆಯಲ್ಲಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಹತ್ಯೆ ನಡೆಸಿದೆ. ಘಟನೆಯ ಬೆನ್ನಲ್ಲೇ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಗವಾನ್ ಸೋನಾವಣೆ ಮಾಹಿತಿ ನೀಡಿದ್ದಾರೆ.