
ಒಂದು ತಿಂಗಳ ವಿದ್ಯುತ್ ಬಿಲ್ 3,419 ಕೋಟಿ ರೂಪಾಯಿ!
ಮಧ್ಯ ಪ್ರದೇಶದ ಇಂಧೋರ್‌ನ ಶಿವ ವಿಹಾರ್ ಕಾಲೋನಿಯ ನಿವಾಸಿ ಪ್ರಿಯಾಂಕಾ ಗುಪ್ತ ಹಾಗೂ ಸಂಜೀವ್ ಕಂಕಣೆ ಎನ್ನುವವರ ಮನೆಗೆ ವಿದ್ಯುತ್ ಮೀಟರ್ ರೀಡ್ ಮಾಡೋ ಸಿಬ್ಬಂದಿ ಬರೋಬ್ಬರಿ 3,419 ಕೋಟಿ ರೂಪಾಯಿ ಮೊತ್ತದ ವಿದ್ಯುತ್ ಬಿಲ್ ನೀಡಿದ್ದಾನೆ.
3419 ಕೋಟಿ ವಿದ್ಯುತ್ ಬಿಲ್!
ಬಿಲ್ ನೋಡಿ ಶಾಕ್‌ಗೆ ಒಳಗಾದ ವ್ಯಕ್ತಿ
ಒಂದು ತಿಂಗಳ ವಿದ್ಯುತ್ ಬಿಲ್ ಮೊತ್ತ 3419 ಕೋಟಿ ರೂಪಾಯಿ ಅಂತ ನೋಡಿ ಮನೆಯವರೆಲ್ಲ ಶಾಕ್‌ಗೆ ಒಳಗಾಗಿದ್ದಾರೆ. ಆದರೆ ಸಂಜೀವ್ ಕಂಕಣೆ ಅವರ ತಂದೆ ವೃದ್ಧರಾಗಿದ್ದು, ವಿದ್ಯುತ್ ಬಿಲ್ ನೋಡಿ ಕಂಗೆಟ್ಟಿದ್ದಾರೆ. ಅಷ್ಟೇ ಅಲ್ಲ, ಕೂಡಲೇ ತೀವ್ರ ಎದೆನೋವು ಹಾಗೂ ಅನಾರೋಗ್ಯಕ್ಕೆ ಒಳಗಾಗಿದ್ದಾರಂತೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯ್ತು ಅಂತ ಹೇಳಲಾಗುತ್ತಿದೆ.
ಇದು ತಾಂತ್ರಿಕ ದೋಷ ಎಂದ ವಿದ್ಯುತ್‌ಚ್ಛಕ್ತಿ ಕಂಪನಿ
ಇನ್ನು ಏಕಾಏಕಿ ಜಾಸ್ತಿ ವಿದ್ಯುತ್ ಬಿಲ್ ಬರುತ್ತಿದ್ದಂತೆಯೇ ಗುಪ್ತಾ ಮನೆಯವರು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತ್ರನ್ ಕಂಪನಿಯ (MPMKVVC) ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಿಲ್ ಮೊತ್ತ ನೋಡಿ ಅವರೂ ಶಾಕ್‌ಗೆ ಒಳಗಾಗಿದ್ದಾರೆ. ಬಳಿಕ ಪರಿಶೀಲನೆ ಮಾಡಿದಾಗ ತಾಂತ್ರಿಕ ದೋಷ ಹಾಗೂ ಮೀಟರ್ ರೀಡ್ ಮಾಡುವವನ ಪ್ರಮಾದ ಎನ್ನುವುದು ಗೊತ್ತಾಗಿದೆ. ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಮಾತನಾಡಿ, ಸಿಬ್ಬಂದಿ ತಪ್ಪಿನಿಂದ ಭಾರಿ ವಿದ್ಯುತ್ ಬಿಲ್ ಬರಲು ಕಾರಣವಾಗಿದ್ದು, ಸಂಬಂಧಪಟ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಅಂತ ಹೇಳಿದ್ದಾರೆ.
ಸರಿಪಡಿಸಿದ ಬಿಲ್ ನೀಡಿದ ವಿದ್ಯುತ್‌ಚ್ಛಕ್ತಿ ಮಂಡಳಿ
‘ಸಾಫ್ಟ್ ವೇರ್ ನಲ್ಲಿ ಬಳಕೆಯಾಗುವ ಘಟಕಗಳ ಜಾಗದಲ್ಲಿ ನೌಕರರೊಬ್ಬರು ಗ್ರಾಹಕರ ಸಂಖ್ಯೆ ನಮೂದಿಸಿದ್ದರಿಂದ ಹೆಚ್ಚಿನ ಮೊತ್ತದ ಬಿಲ್ ಬಂದಿದೆ. ಸರಿಪಡಿಸಿದ ₹ 1,300 ಬಿಲ್ ಅನ್ನು ವಿದ್ಯುತ್ ಗ್ರಾಹಕರಿಗೆ ನೀಡಲಾಗಿದೆ’ ಅಂತ ಅಧಿಕಾರಿಗಳು ಹೇಳಿದ್ದಾರೆ.
ನೌಕರನ ವಿರುದ್ಧ ಕ್ರಮ
ಸದ್ಯ ದೋಷವನ್ನು ಸರಿಪಡಿಸಲಾಗಿದ್ದು, ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇನ್ನು ಬಿಲ್ ಅನ್ನು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತ್ರನ್ ಕಂಪನಿಯ (MPMKVVC) ಪೋರ್ಟಲ್ ಮೂಲಕ ಪರಿಶೀಲಿಸಲಾಗಿದೆ. ಅದು ಸಾಮಾನ್ಯವಾಗಿ ಎಷ್ಟು ಬರಬೇಕು ಅಷ್ಟು ತೋರಿಸುತ್ತಿದ್ದು, ಇದೀಗ ಸಮಸ್ಯೆ ಸರಿಯಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.