ಪ್ಲಾಟ್ಫಾರ್ಮ್ ಶುಲ್ಕ: ಪೇಟಿಎಂ, ಫೋನ್ಪೇನಲ್ಲಿ ರೀಚಾರ್ಜ್ ದುಬಾರಿ ಏನಿದು ಪ್ಲಾಟ್ಫಾರ್ಮ್ ಶುಲ್ಕ? ಎಷ್ಟು ಪ್ಲಾಟ್ಫಾರ್ಮ್ ಶುಲ್ಕ ಪಾವತಿ ಮಾಡಬೇಕಾಗುತ್ತದೆ?

ಈ ಹಿಂದೆ ನಾವು ಮೊಬೈಲ್ ರೀಚಾರ್ಜ್ ಮಾಡಲು, ವಿದ್ಯುತ್ ಬಿಲ್ ಕಟ್ಟಲು ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಬಿಲ್ ಪಾವತಿಗಾಗಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿತ್ತು. ಆದರೆ ಈಗ ನಮಗೆ ಆ ಕಷ್ಟವಿಲ್ಲ. ನಾವು ಮನೆಯಲ್ಲೇ ಕೂತು ವಿದ್ಯುತ್ ಬಿಲ್ ಕಟ್ಟಬಹುದು, ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು.
ಆದರೆ ಇನ್ನು ಮುಂದೆ ಫೋನ್ಪೇ ಹಾಗೂ ಪೇಟಿಎಂನಲ್ಲಿ ವಿದ್ಯುತ್ ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಮಾಡುವುದು ದುಬಾರಿಯಾಗಲಿದೆ.
ಹೌದು ಈ ಹಿಂದೆ ಹಲವಾರು ಆಫರ್ಗಳನ್ನು ನೀಡಿದ್ದ ಫೋನ್ಪೇ ಹಾಗೂ ಪೇಟಿಎಂ ಈಗ ಪ್ಲಾಟ್ಫಾರ್ಮ್ ಶುಲ್ಕವನ್ನು ವಿಧಿಸಲು ಆರಂಭ ಮಾಡಿದೆ. ಈ ಹಿಂದೆ ಈ ಎರಡು ಆಪ್ಗಳಲ್ಲಿ ನಾವು ವಿದ್ಯುತ್ ಬಿಲ್ ಪಾವತಿ ಮಾಡುವಾಗ, ಮೊಬೈಲ್ ರೀಚಾರ್ಜ್ ಮಾಡುವಾಗ ಕ್ಯಾಷ್ಬ್ಯಾಕ್ ಪಡೆಯಲು ಸಾಧ್ಯವಾಗುತ್ತಿತ್ತು. ಜನರು ತಮ್ಮ ಆಪ್ ಅನ್ನು ಅಧಿಕವಾಗಿ ಬಳಕೆ ಮಾಡುವುದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಸ್ಥೆಗಳು ಕ್ಯಾಷ್ಬ್ಯಾಕ್ ಆಫರ್ಗಳನ್ನು ನೀಡಿತ್ತು. ಆದರೆ ಈಗ ಶುಲ್ಕವನ್ನು ವಿಧಿಸಲಾಗುತ್ತಿದೆ.
ಈಗ ಮೊಬೈಲ್ ರೀಚಾರ್ಜ್ ಮಾಡುವುದಕ್ಕೆ ಹಾಗೂ ವಿದ್ಯುತ್ ಬಿಲ್ ಪಾವತಿ ಮಾಡುವುದಕ್ಕೆ ಈ ಆಪ್ಗಳಲ್ಲಿ ನಾವು ಪ್ಲಾಟ್ಫಾರ್ಮ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಈ ಬಗ್ಗೆ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮುಂದೆ ಈ ಆಪ್ಗಳನ್ನು ನಾವು ಬಳಕೆ ಮಾಡುವುದಿಲ್ಲ ಎಂದು ಕೂಡಾ ಕೆಲವು ನೆಟ್ಟಿಗರು ಹೇಳಿಕೊಂಡಿದ್ದಾರೆ. ದುಬಾರಿ ಶುಲ್ಕದ ಸ್ಕ್ರೀನ್ಶಾಟ್ ಕೂಡಾ ಹಂಚಿಕೊಂಡಿದ್ದಾರೆ. ಎಷ್ಟು ಪ್ಲಾಟ್ಫಾರ್ಮ್ ಶುಲ್ಕ ಪಾವತಿಸಬೇಕಾಗುತ್ತದೆ, ನೆಟ್ಟಿಗರ ಆರೋಪವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ….
ಏನಿದು ಪ್ಲಾಟ್ಫಾರ್ಮ್ ಶುಲ್ಕ?ಫೋನ್ಪೇ ಪ್ರಕಾರ ಪ್ಲಾಟ್ಫಾರ್ಮ್ ಶುಲ್ಕವು ಮೊಬೈಲ್ ರೀಚಾರ್ಜ್ ಮಾಡಲು ಹಾಗೂ ಬಿಲ್ಗಳನ್ನು ಪಾವತಿ ಮಾಡುವ ಸಂದರ್ಭದಲ್ಲಿ ವಿಧಿಸಲಾಗುವ ಶುಲ್ಕವಾಗಿದೆ. ಇನ್ನು ಇದರಲ್ಲಿ ಜಿಎಸ್ಟಿ ಕೂಡಾ ಸೇರ್ಪಡೆಯಾಗುತ್ತದೆ. ಒಂದು ವೇಳೆ ನಾವು ಮೊಬೈಲ್ ರೀಚಾರ್ಜ್ ಮಾಡುವಾಗ ಪೇಮೆಂಟ್ ಫೇಲ್ ಆದರೆ, ನಮ್ಮ ಖಾತೆಯಿಂದ ಕಡಿತ ಮಾಡಲಾದ ಪ್ಲಾಟ್ಫಾರ್ಮ್ ಶುಲ್ಕವು ಮರು ಪಾವತಿ ಆಗುತ್ತದೆ. ಹಾಗೆಯೇ ನಮ್ಮ ಖಾತೆಯಿಂದ ಕಡಿತವಾದ ರೀಚಾರ್ಜ್ ಮೊತ್ತವನ್ನು ಕೂಡಾ ಮರು ಪಾವತಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಜಿಎಸ್ಟಿ ಕಡಿತ ಮಾಡಲಾಗುವುದಿಲ್ಲ. ರೀಚಾರ್ಜ್ ಯಶಸ್ವಿಯಾದರೆ ಮಾತ್ರ ಜಿಎಸ್ಟಿ ವಿಧಿಸಲಾಗುತ್ತದೆ.
ಎಷ್ಟು ಪ್ಲಾಟ್ಫಾರ್ಮ್ ಶುಲ್ಕ ಪಾವತಿ ಮಾಡಬೇಕಾಗುತ್ತದೆ?
ನೀವು ಪೇಟಿಎಂ ಆಪ್ ಅನ್ನು ಬಳಕೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ರೀಚಾರ್ಜ್ ಮಾಡುವುದಾದರೆ ನಿಮಗೆ ಒಂದು ರೂಪಾಯಿ ಪ್ಲಾಟ್ಫಾರ್ಮ್ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರತಿ ಬಾರಿ ನೀವು ಮೊಬೈಲ್ ರೀಚಾರ್ಜ್ ಮಾಡಿದಾಗ ನಿಮಗೆ ಒಂದು ರೂಪಾಯಿ ಪ್ಲಾಟ್ಫಾರ್ಮ್ ಶುಲ್ಕ ವಿಧಿಸಲಾಗುತ್ತದೆ. ಆದರೆ ಫೋನ್ಪೇ ಆಪ್ನಲ್ಲಿ ನೀವು ಮೊಬೈಲ್ ರೀಚಾರ್ಜ್ ಮಾಡಿದರೆ ಎರಡು ರೂಪಾಯಿ ಪ್ಲಾಟ್ಫಾರ್ಮ್ ಶುಲ್ಕ ವಿಧಿಸಲಾಗುತ್ತದೆ. ಪೇಟಿಎಂನಲ್ಲಿ 30 ದಿನಗಳ ಏರ್ಟೆಲ್ ಮೊಬೈಲ್ ರೀಚಾರ್ಜ್ 296 ರೂಪಾಯಿ ಆಗಿದ್ದರೆ, ಅದಕ್ಕೆ ಪ್ಲಾಟ್ಫಾರ್ಮ್ ಚಾರ್ಜ್ ಸೇರಿ 297 ರೂಪಾಯಿ ಆಗಲಿದೆ. ಫೋನ್ಪೇನಲ್ಲಿ 296 ರೂಪಾಯಿಯ ರೀಚಾರ್ಜ್ಗೆ ನೀವು 298 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಎಲ್ಲರಿಗಿಲ್ಲ ಪ್ಲಾಟ್ಫಾರ್ಮ್ ಶುಲ್ಕ!
ಈ ನಡುವೆ ಇನ್ನೊಂದು ಕುತೂಹಲಕಾರಿ ವಿಚಾರವನ್ನು ನೀವು ತಿಳಿದಿರಬೇಕು. ಈ ಎರಡೂ ಆಪ್ಗಳಲ್ಲಿ ಎಲ್ಲಾ ಗ್ರಾಹಕರಿಗೆ ಪ್ಲಾಟ್ಫಾರ್ಮ್ ಚಾರ್ಜ್ ಅನ್ನು ವಿಧಿಸಲಾಗುವುದಿಲ್ಲ. ಕೆಲವು ಗ್ರಾಹಕರಿಗೆ ಮಾತ್ರ ಪ್ಲಾಟ್ಫಾರ್ಮ್ ಚಾರ್ಜ್ ಅನ್ನು ವಿಧಿಸಲಾಗುತ್ತಿದೆ. ಆದರೆ ಇದರ ಮಾನದಂಡ ತಿಳಿದಿಲ್ಲ. ನಿಮಗೆ ಈಗ ಪ್ಲಾಟ್ಫಾರ್ಮ್ ಶುಲ್ಕ ವಿಧಿಸದಿದ್ದರೂ ಮುಂದಿನ ದಿನಗಳಲ್ಲಿ ವಿಧಿಸುವ ಸಾಧ್ಯತೆ ಇದೆ.
@Paytmcare Paytm is charging heavy platform fee without prior information to customers. I am uninstalling your app. See the linked screen shot of BSES bill payment of Rs6770 for which Paytm charged Rs 120 as platform fee. Disgusting. https://t.co/3zGv1LJOW7 pic.twitter.com/MKCGQT0MrZ
— KamlaKant upadhyay (@KamlakantU) July 24, 2022
ನೆಟ್ಟಿಗರ ಆರೋಪವೇನು?
ಫೋನ್ಪೇನಲ್ಲಿ ಎರಡು ರೂಪಾಯಿ ಹಾಗೂ ಪೇಟಿಎಂನಲ್ಲಿ ಒಂದು ರೂಪಾಯಿ ಪ್ಲಾಟ್ಫಾರ್ಮ್ ಚಾರ್ಜ್ ಅನ್ನು ವಿಧಿಸಲಾಗುತ್ತದೆ. ಆದರೆ ತಮಗೆ ಅಧಿಕ ಪ್ಲಾಟ್ಫಾರ್ಮ್ ಚಾರ್ಜ್ ಅನ್ನು ವಿಧಿಸಲಾಗಿದೆ ಎಂಬುವುದು ನೆಟ್ಟಿಗರ ಆರೋಪವಾಗಿದೆ. ಪೇಟಿಎಂನಲ್ಲಿ ಬಿಲ್ ಪಾವತಿ ಮಾಡಿದಾಗ ಐದು ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ ಎಂದು ನೆಟ್ಟಿಗರೊಬ್ಬರು ಆರೋಪ ಮಾಡಿದ್ದಾರೆ. ಇನ್ನು ಈ ಹಿಂದೆ ಪೇಟಿಎಂ ಯಾವುದೇ ಶುಲ್ಕವನ್ನು ವಿಧಿಸುತ್ತಿರಲಿಲ್ಲ. ಆದರೆ ಈಗ ವಿಧಿಸುತ್ತದೆ ಎಂದು ನೆಟ್ಟಿಗರು ಆರೋಪ ಮಾಡಿದ್ದಾರೆ. ಇನ್ನೋರ್ವ ನೆಟ್ಟಿಗರು ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದ್ದಾರೆ. 6770 ರೂಪಾಯಿಯ ಬಿಲ್ ಪಾವರಿಗೆ ಪೇಟಿಎಂನಲ್ಲಿ 120.51 ರೂಪಾಯಿಯ ದಂಡವನ್ನು ವಿಧಿಸಲಾಗಿದೆ ಎಂದು ತೋರಿಸುವ ಸ್ಕ್ರೀನ್ಶಾಟ್ ಅನ್ನು ಕಮ್ಲಕಾಂತ್ ಉಪಾಧ್ಯಯ ಎಂಬವನ್ನು ಟ್ವೀಟ್ ಮಾಡಿದ್ದಾರೆ.