KPTCLನಲ್ಲಿ ಶುರುವಾಯಿತು ಹಿರಿಯ ಅಧಿಕಾರಿ V/S ನೌಕರರ ನಡುವೆ ವಾರ್ !

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ. ಇಡೀ ರಾಜ್ಯದ ಎಸ್ಕಾಂಗಳನ್ನು ನಿಯಂತ್ರಿಸುವ ನಿಗಮ. ಈ ನಿಗಮದೊಳಗೆ ಈಗ ಫೈಯರ್ ವಾರ್ ಶುರುವಾಗಿದೆ. ವಿಚಾರ ಇಷ್ಟೇ ನೋಡಿ. KPTCL ಜನರಲ್ ಮ್ಯಾನೇಜರ್ ಆಗಿರುವ ಮಂಜಪ್ಪ ಎಂಬವರು ಇತ್ತೀಚೆಗಷ್ಟೇ ನಿಗಮದ ಕೆಲ ಸಿಬ್ಬಂದಿಗಳನ್ನು ಲಂಚ ಪಡೆದ ಆರೋಪದ ಮೇರೆಗೆ ಕೆಲಸದಿಂದ ಅಮಾನತು ಮಾಡಿದ್ದರು. ಇದು ಈಗ ನಿಗಮದ ಒಳಗೆ ಹಿರಿಯ ಅಧಿಕಾರಿ ವರ್ಸಸ್ ನೌಕರರು ಎಂಬ ಸಮರಕ್ಕೆ ಕಾರಣವಾಗಿದೆ. ಈಗ ಅಮಾನತುಗೊಂಡ ಸಿಬ್ಬಂದಿ KPTCL ಜನರಲ್ ಮ್ಯಾನೇಜರ್ ಮಂಜಪ್ಪಗೆ ಕಿರುಕುಳ ನೀಡಲು ಶುರು ಮಾಡಿದ್ದಾರೆ.
GM ಮಂಜಪ್ಪ ವಿರುದ್ಧ ಸಮರ
ಮಂಜಪ್ಪ ಈ ಜುಲೈ ಕೊನೆಗೆ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಆದರೆ ಸರ್ಕಾರ ಇವರ ಸೇವೆ ಗುರುತಿಸಿ ಮತ್ತೊಂದು ವರ್ಷ ಸೇವೆ ಸಲ್ಲಿಸಲು ಗುತ್ತಿಗೆ ಆಧಾರದ ಮೇರೆಗೆ ಅವಕಾಶ ಮಾಡಿಕೊಟ್ಟಿದೆ. ಈ ಹಿನ್ನೆಲೆ ಅಮಾನತ್ತುಗೊಂಡ ಸಿಬ್ಬಂದಿ GM ಮಂಜಪ್ಪ ವಿರುದ್ಧ ಸಮರ ಸಾರಿದ್ದಾರೆ. ನಿವೃತ್ತಿಹೊಂದಿದರೂ ಸೇವೆ ಮುಂದುವರೆಸಲು ಹೇಗೆ ಸಾಧ್ಯ ಎಂದು GM ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಂಧನ ಸಚಿವ ಸುನಿಲ್ ಕುಮಾರ್ ಸ್ವಜಾತಿ ಪ್ರೇಮ ಮೆರೆದಿದ್ದಾರೆ ಎಂದು ಅಮಾನತುಗೊಂಡ ಸಿಬ್ಬಂದಿಗಳ ಆರೋಪ ಮಾಡ್ತಿದ್ದಾರೆ. ಇದರ ನಡುವೆ KPTCL ನೌಕರ ಸಂಘ ಕೂಡ ಎಂಟ್ರಿಕೊಟ್ಟಿದ್ದು, ರಾಜ್ಯಕ್ಕೆ ವಿದ್ಯುತ್ ಸೇವೆ ನೀಡುವವರ ನಡುವೆ ಈಗ ಸಮರ ಉಂಟಾಗಿದೆ.
ಸಿಎಂ ಬೊಮ್ಮಾಯಿಗೆ ಮನವಿ
ಈ ಬಗ್ಗೆ ಮಾತನಾಡಿದ KPTCL ನೌಕರ ಸಂಘದ ಕಾರ್ಯದರ್ಶಿ ಕುಮಾರ್, ನಮ್ಮ ಸಂಸ್ಥೆಯ ಒಗ್ಗಟ್ಟನ್ನು ಹೊಡೆಯಲು ಕುತಂತ್ರಿ ಕೆಲಸ ಮಾಡಲಾಗುತ್ತಿದೆ. ಮಂಜಪ್ಪ ಅವರ ಸೇವೆ ಗುರುತಿಸಿ ಸರ್ಕಾರ ಮತ್ತಷ್ಟು ಅವಕಾಶ ಮಾಡಿಕೊಟ್ಟಿದೆ. ಈ ಸಂಬಂಧ GM ಮಂಜಪ್ಪರವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಆರೋಪ ಮಾಡಿ ಅವಹೇಳನ ಮಾಡಲಾಗುತ್ತಿದೆ. ಇದು ಗಂಭೀರ ವಿಚಾರವಾಗಿದ್ದು, ಸಿಎಂ ಬೊಮ್ಮಾಯಿಗೆ ಮನವಿ ಕೊಟ್ಟು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ನಾವು ಮನವಿ ಮಾಡಿದ್ದೇವೆ ಎಂದರು.
ಸದ್ಯ ನಿಗಮ ಸಿಬ್ಬಂದಿಗಳ ನಡುವೆ ಒಳಗೊಳಗೇ ಸಮರ ನಡೆಯುತ್ತಿದ್ದು ಯಾವ ಸಮಯದಲ್ಲಿ ಬೇಕಿದ್ದರೂ ಇದು ಬೀದಿ ಜಗಳವಾಗುವ ಸಾಧ್ಯತೆ ಇದೆ. ಹೀಗಾಗಿ KPTCL ನೌಕರ ಸಂಘ ಸಿಎಂ ಬೊಮ್ಮಾಯಿಗೆ ಹಾಗೂ ಇಂಧನ ಸಚಿವರಿಗೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮನೆ ಮನೆಗೂ ಹೊಸ ವಿದ್ಯುತ್ ಮೀಟರ್
ಬೆಸ್ಕಾಂನ ಬೆಂಗಳೂರು ಮೆಟ್ರೋ ಪಾಲಿಟನ್ ಪ್ರದೇಶ ವಲಯದಲ್ಲಿನ (BMAZ) ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಅನುಕುಲವಾಗುವ ಡಿಎಲ್‌ಎಮ್‌ಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು (Digital Measurement) ನೀಡಲಾಗುತ್ತಿದೆ. ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವ್ಯಾಪ್ತಿಯಲ್ಲಿರುವ (BMAZ) 17,68,000 ಇಲೆಕ್ಟ್ರೊ ಮೆಕಾನಿಕಲ್ ಮೀಟರ್ ಗಳನ್ನು ಡಿಎಲ್‌ಎಮ್‌ಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್ ಗೆ ಬದಲಾವಣೆ ಮಾಡುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಂಡಿದೆ.