
ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆಗೀಡಾಗಿದ್ದು, ತೀವ್ರ ದುಃಖಕ್ಕೆ ಒಳಗಾಗಿರುವ ತಾಯಿ ಹಾಗೂ ಪತ್ನಿ, ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮಗ ದುಡಿದು ನಮ್ಮನ್ನು ಸಾಕುತ್ತಿದ್ದ, ನಮ್ಮ ಮನೆ ಜರಿದು ಬೀಳುವ ಸ್ಥಿತಿ ಇದೆ, ಆದಷ್ಟು ಬೇಗ ಮನೆ ಕಟ್ಟಬೇಕೆಂದು ಆಸೆ ಹೊಂದಿದ್ದ. ಯಾರ ಜೊತೆಯೂ ಜಗಳ ಮಾಡಿದ ಮಗ ಅಲ್ಲ, ಅನ್ಯಾಯವಾಗಿ ನನ್ನ ಮಗನನ್ನು ಬಲಿ ಪಡೆದಿದ್ದಾರೆ ಎಂದು ಪ್ರವೀಣ್ ತಾಯಿ ರತ್ನಾವತಿ ಹೇಳಿದ್ದಾರೆ.
ನಾನು ಪ್ರತಿದಿನ ಪ್ರವೀಣ್ ಜೊತೆ ಚಿಕನ್ ಸೆಂಟರ್ನಲ್ಲಿರುತ್ತಿದ್ದೆ. ಆದರೆ ನಿನ್ನೆ ಕುಟುಂಬದ ಕಾರ್ಯಕ್ರಮವಿದ್ದ ಕಾರಣ ಹೋಗಲು ಸಾಧ್ಯವಾಗಲಿಲ್ಲ. ಎಲ್ಲರ ಜೊತೆಯೂ ಪ್ರವೀಣ್ ಆತ್ಮೀಯವಾಗಿ ಇರುತ್ತಿದ್ದರು. ಮುಸ್ಲಿಮರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಯಾರ ಜೊತೆಯೂ ದ್ವೇಷ ಜಗಳಕ್ಕೆ ಅವರು ಹೋಗಿಲ್ಲ. ಕಳೆದ ವಾರ ಬೆಳ್ಳಾರೆಯಲ್ಲಿ ಕೊಲೆ ಆದಾಗ ಪೇಟೆಯಲ್ಲಿ ಜನಸಂಚಾರ ಕಡಿಮೆ ಆಗಿದೆ ಅಂತ ಹೇಳಿದ್ದರು. ಪ್ರತೀಕಾರದ ಹತ್ಯೆಯಾದರೆ ಏನೂ ಮಾಡದ ನನ್ನ ಗಂಡನನ್ನು ಯಾಕೆ ಬಲಿ ಪಡೆದರು? ಎಂದು ಪ್ರವೀಣ್ ಪತ್ನಿ ನೂತನ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ 24 ಗಂಟೆಯೊಳಗೆ ಆರೋಪಿಗಳನ್ನು ಬಂಧನ ಮಾಡಬೇಕು. ಅವರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.