ವಿಡಿಯೋ: ಅರ್ಪಿತಾ ಮುಖರ್ಜಿ ಮತ್ತೊಂದು ಫ್ಲಾಟ್ ಮೇಲೆ ಇಡಿ ದಾಳಿ- 15 ಕೋಟಿ ಪತ್ತೆ

ಕೋಲ್ಕತ್ತಾ, ಜುಲೈ 27: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ಚುರುಕು ಗತಿಯಲ್ಲಿ ಸಾಗುತ್ತಿದೆ. ಬುಧವಾರ, ಜಾರಿ ನಿರ್ದೇಶನಾಲಯವು ಶೋಧ ಕಾರ್ಯಾಚರಣೆಯಲ್ಲಿ ಕೋಲ್ಕತ್ತಾದ ಬೆಲ್ಘಾರಿಯಾ ಟೌನ್ ಕ್ಲಬ್‌ನಲ್ಲಿರುವ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮತ್ತೊಂದು ಫ್ಲಾಟ್‌ನಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದೆ.
ಕಳೆದ ವಾರದ ಆರಂಭದಲ್ಲಿ ಇಡಿ ದಾಳಿ ವೇಳೆ ಅರ್ಪಿತಾ ಮುಖರ್ಜಿ ಅವರ ಮನೆಯಿಂದ 21 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತ್ತು. ಎಸ್‌ಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಅರ್ಪಿತಾ ಮುಖರ್ಜಿ ಅವರನ್ನು ಶನಿವಾರ ಬಂಧಿಸಲಾಗಿತ್ತು.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಪಾರ್ಥ ಚಟರ್ಜಿ ಸಂಕಷ್ಟ ಹೆಚ್ಚುತ್ತಲೇ ಇದೆ. ED ಯ ಕಾರ್ಯಚರಣೆ ಅವುಗಳ ಮೇಲೆ ಬಿಗಿಯಾಗುತ್ತಿವೆ. ಒಂದೆಡೆ ಸಂಸ್ಥೆ ಪಾರ್ಥ ಚಟರ್ಜಿ ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದ್ದರೆ ಮತ್ತೊಂದೆಡೆ ದಾಳಿಗಳೂ ನಡೆಯುತ್ತಿವೆ.
ಬುಧವಾರ ಅರ್ಪಿತಾ ಮುಖರ್ಜಿ ಅವರ ಮತ್ತೊಂದು ಫ್ಲಾಟ್ ಮೇಲೆ ಇಡಿ ದಾಳಿ ನಡೆಸಿತ್ತು. ಇದರಲ್ಲಿ ಏಜೆನ್ಸಿಗೆ ಅಪಾರ ಪ್ರಮಾಣದ ನಗದು ಸಹಿತ ಕೆಲವು ಪ್ರಮುಖ ದಾಖಲೆಗಳೂ ಸಿಕ್ಕಿವೆ. ಎಎನ್‌ಐ ವರದಿ ಪ್ರಕಾರ ಬುಧವಾರ ನಡೆದ ದಾಳಿಯಲ್ಲಿ 15 ಕೋಟಿ ನಗದು ಪತ್ತೆಯಾಗಿದೆ. ಕಳೆದ ಬಾರಿಯ ದಾಳಿ ಸೇರಿ ಸುಮಾರು 36 ಕೋಟಿ ಮೌಲ್ಯದ ನಗದು ಪತ್ತೆಯಾಗಿದೆ.
ಮತ್ತೆ 15 ಕೋಟಿ ನಗದು ಪತ್ತೆಶಾಲಾ ಸೇವಾ ಆಯೋಗದ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಗೆ ಸಂಬಂಧಿಸಿದಂತೆ ಇಡಿ ಶನಿವಾರ ಟಿಎಂಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪಾರ್ಥ ಚಟರ್ಜಿ ಅವರನ್ನು ಬಂಧಿಸಿತ್ತು. ವಸೂಲಿಯಾದ ನಗದನ್ನು ಎಣಿಸಲು ನೋಟು ಎಣಿಕೆ ಯಂತ್ರಗಳು ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಏಜೆನ್ಸಿ ಕರೆಸಿತ್ತು. ನಗದು ಹೊರತಾಗಿ ಇತರೆ ಆಸ್ತಿ ದಾಖಲೆಗಳನ್ನೂ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ಹಣದ ರಾಶಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
#WATCH | West Bengal: Hugh amount of cash, amounting to at least Rs 15 Crores, recovered from the residence of Arpita Mukherjee at Belgharia.
She is a close aide of West Bengal Minister Partha Chatterjee. pic.twitter.com/7MMFsjzny1
— ANI (@ANI) July 27, 2022
ಮಾಣಿಕ್ ಭಟ್ಟಾಚಾರ್ಯಗೆ ಸಮನ್ಸ್
ಇದಕ್ಕೂ ಮೊದಲು ಬಂಗಾಳದ ಸಚಿವ ಮತ್ತು ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತ ಸಹಾಯಕ ಅರ್ಪಿತಾ ಮುಖರ್ಜಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಅಲ್ಲಿಂದ ಇಡಿ ಕಚೇರಿ ತಲುಪಿದರು. ಕಳೆದ ವಾರ ನಡೆದ ದಾಳಿಯ ವೇಳೆ ಅರ್ಪಿತಾ ಮುಖರ್ಜಿ ಅವರ ಮನೆಯಿಂದ ಇಡಿ 21 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತ್ತು. ಅದೇ ಸಮಯದಲ್ಲಿ, ಜಾರಿ ನಿರ್ದೇಶನಾಲಯವು ಇಡಿ ಕೋಲ್ಕತ್ತಾ ಕಚೇರಿಯಲ್ಲಿ ಹಾಜರಾದ ಟಿಎಂಸಿ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರಿಗೂ ಸಮನ್ಸ್ ನೀಡಿತ್ತು.
ಹಣದ ರಾಶಿ ಪತ್ತೆ
ಶುಕ್ರವಾರ (ಜುಲೈ 22) ಇ.ಡಿ ಅಧಿಕಾರಿಗಳು ದಕ್ಷಿಣ ಕೋಲ್ಕತ್ತಾ ವಸತಿ ಕ್ಯಾಂಪಸ್‌ನಲ್ಲಿರುವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ದಾಳಿ ಮಾಡಿದ್ದರು. 500 ರು. ಮತ್ತು 2000 ರು. ಮುಖಬೆಲೆಯ ಹಣದ ರಾಶಿ ಮತ್ತು ಬಂಡಲ್ ಮಾಡಿದ್ದ ಹಣವನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದರು. ಅರ್ಪಿತಾ ಮುಖರ್ಜಿ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ ಮತ್ತು ಹಣದ ಮೂಲದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ. ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಬಂಧಿತ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಹೇಳಿಕೆ
ಸಚಿವರು ಪ್ರತಿ ವಾರ ಅಥವಾ 10 ದಿನಗಳಿಗೊಮ್ಮೆ ಅರ್ಪಿತಾ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಮೂಲಗಳು ಹೇಳಿವೆ. “ಪಾರ್ಥ ಚಟರ್ಜಿ ನನ್ನ ಮನೆ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ. ಆ ಮಹಿಳೆ ಕೂಡ ಅವರ ಆಪ್ತ ಸ್ನೇಹಿತೆ” ಎಂದು ಅರ್ಪಿತಾ ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಕೋಣೆಯಲ್ಲಿ ಎಷ್ಟು ಹಣವಿದೆ ಎಂದು ಸಚಿವರು ಎಂದಿಗೂ ಬಹಿರಂಗಪಡಿಸಲಿಲ್ಲ ಎಂದು ಅವರು ಹೇಳಿದ್ದಾರೆ. ಅರ್ಪಿತಾ ಮುಖರ್ಜಿ ಅವರಿಗೆ ಬಂಗಾಳಿ ನಟರೊಬ್ಬರು ಪಾರ್ಥ ಚಟರ್ಜಿ ಅವರನ್ನು ಪರಿಚಯಿಸಿದರು ಮತ್ತು ಇಬ್ಬರೂ 2016 ರಿಂದ ಹತ್ತಿರವಾಗಿದ್ದರು ಎಂದು ಹೇಳಿದ್ದಾರೆ.
ವರ್ಗಾವಣೆಗಾಗಿ ಮತ್ತು ಕಾಲೇಜುಗಳಿಗೆ ಮಾನ್ಯತೆ ಪಡೆಯಲು ಸಹಾಯಕ್ಕಾಗಿ ಪಡೆದ ಕಿಕ್‌ಬ್ಯಾಕ್‌ಗಳಿಂದ ಹಣ ಬಂದಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಪಾರ್ಥ ಮುಖರ್ಜಿ ಅವರನ್ನು ಆಗಸ್ಟ್ 3 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಗಿದೆ.